Advertisement

ಶಾಲಾ ಮಕ್ಕಳ ವಾಹನ: ಟ್ರಿಪ್‌ ಕಡಿತಕ್ಕೆ ನಿರ್ಧಾರ

10:13 AM Jul 12, 2019 | Team Udayavani |

ಮಂಗಳೂರು,: ಕಾನೂನು ರಕ್ಷಣೆಯ ಹೆಸರಿನಲ್ಲಿ ಪೊಲೀಸರು ದಾಳಿ ನಡೆಸುತ್ತಿದ್ದಾರೆಂದು ಆರೋಪಿಸಿ ದ.ಕ. ಶಾಲಾ ಮಕ್ಕಳ ವಾಹನ ಚಾಲಕರು ಸ್ವಯಂಪ್ರೇರಿತವಾಗಿ ಟ್ರಿಪ್‌ ಕಡಿತಗೊಳಿಸಲು ನಿರ್ಧರಿಸಿದ್ದು, ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಎದುರಾಗಿದೆ.

Advertisement

ಪೊಲೀಸರು ಶಾಲಾ ಮಕ್ಕಳ ವಾಹನ ಚಾಲಕರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿ ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘವು ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಮಂಗಳೂರು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನಿರ್ದೇಶನದ ಮೇರೆಗೆ ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್‌ ಮತ್ತು ಎಸಿಪಿ ಮಂಜುನಾಥ ಶೆಟ್ಟಿ ಅವರು ಸಂಘದ ಮುಖಂಡರನ್ನು ಕರೆದು ಮುಷ್ಕರ ಕೈ ಬಿಡುವಂತೆ ಬುಧವಾರ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮತ್ತು ಸುಪ್ರೀಂ ಕೋರ್ಟ್‌ ಆದೇಶಕ್ಕೆ ಗೌರವ ನೀಡಿ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಜು. 12ರಂದು ಹಮ್ಮಿಕೊಂಡಿದ್ದ ಪ್ರತಿಭಟನ ಸಭೆ ಕೈಬಿಡಲಾಗಿದೆ. ಮುಂದೆ ಶಾಲಾ ಟ್ರಿಪ್‌ ಮಾಡುವುದಿಲ್ಲ, ಬದಲಾಗಿ ಬೇರೆ ಉದ್ಯೋಗ ನೋಡಿಕೊಳ್ಳುವುದಾಗಿ ಸಂಘಕ್ಕೊಳಪಟ್ಟ 1,400 ಮಂದಿ ಸದಸ್ಯರು ನಿರ್ಧರಿಸಿದ್ದಾರೆ ಎಂದು ಸಂಘದ ಪ್ರ. ಕಾರ್ಯದರ್ಶಿ ಕಿರಣ್‌ ಲೇಡಿಹಿಲ್‌ ತಿಳಿಸಿದ್ದಾರೆ.

ಸಂಘದ ಅಧ್ಯಕ್ಷ ಮೋಹನ್‌ಕುಮಾರ್‌ ಅತ್ತಾವರ “ಉದಯ ವಾಣಿ’ಗೆ ಪ್ರತಿಕ್ರಿಯಿಸಿ, ಕೆಲವು ಚಾಲಕರು ತಾವು ಟ್ರಿಪ್‌ ಮಾಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ.

ರಸ್ತೆಗಿಳಿಯದ ವಾಹನಗಳು
ಆಟೋ, ಓಮ್ನಿ, ಟ್ಯಾಕ್ಸಿ ಸಹಿತ ದ.ಕ. ಜಿಲ್ಲೆಯ ಬಹುತೇಕ ಶಾಲಾ ಮಕ್ಕಳ ವಾಹನಗಳ ಚಾಲಕರು ಗುರುವಾರ ವಾಹನಗಳನ್ನು ರಸ್ತೆಗಿಳಿಸಲಿಲ್ಲ. ಈ ಬಗ್ಗೆ ಮೊದಲೇ ತಿಳಿಸಿದ್ದರಿಂದ ಪೋಷಕರೇ ಮಕ್ಕಳನ್ನು ಸ್ವಂತ, ಬಾಡಿಗೆ ವಾಹನದಲ್ಲಿ ಶಾಲೆಗೆ ಬಿಟ್ಟು ಕರೆತಂದಿದ್ದಾರೆ. ಆದರೆ ಸಂಪೂರ್ಣ ಟ್ರಿಪ್‌ ಕಡಿತಗೊಳಿಸಿದರೆ ಪೋಷಕರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ.

“ಮಿತಿ ಮೀರಿ ಸಾಗಿಸಿದರೆ ಕ್ರಮ’
ಶಾಲಾ ಮಕ್ಕಳ ವಾಹ ಗಳಲ್ಲಿ ಮಿತಿ ಮೀರಿ ಮಕ್ಕಳನ್ನು ಸಾಗಿಸಿದರೆ ಕ್ರಮ ಕೈಗೊಳ್ಳಲಾಗು ವುದು ಎಂದು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಇಂತಹ ಹಲವು ವಾಹನಗಳ ವಿರುದ್ಧ ಪ್ರಕರಣ ಗಳನ್ನು ದಾಖಲಿಸಲಾಗಿದೆ ಎಂದಿ ರುವ ಅವರು, ಕೆಲವು ದಿನಗಳ ಹಿಂದೆ ಶಾಲಾ ಬಸ್‌ ಒಂದರಲ್ಲಿ ಮಕ್ಕಳು ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಹೋಗುತ್ತಿದ್ದ ಚಿತ್ರವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಶಾಲಾ ವಾಹನ ಮಾಲಕ-ಚಾಲಕರ ಸಂಘದವರು ತಮ್ಮ ವಿರುದ್ಧ ಕೈಗೊಳ್ಳುವ ಕ್ರಮವನ್ನು ವಿರೋಧಿಸಿ ಪ್ರತಿಭಟಿಸುವ ಬದಲು ಈ ರೀತಿ ಮಕ್ಕಳನ್ನು ಸಾಗಾಟ ಮಾಡುವುದನ್ನು ನಿಲ್ಲಿಸಲಿ ಎಂದು ಸಲಹೆ ಮಾಡಿದ್ದಾರೆ.

Advertisement

ನಾವು ಅಸಹಾಯಕರು
ಮಕ್ಕಳನ್ನು ಖಾಸಗಿ ವಾಹನಗಳಲ್ಲಿ ಶಾಲೆಗೆ ಕರೆದೊಯ್ಯುವಾಗ ಇಂತಿಷ್ಟೇ ಮಕ್ಕಳನ್ನು ಸಾಗಿಸಬೇಕೆಂಬ ನಿಯಮವಿದೆ. ಆದರೆ ಕೆಲವು ವಾಹನ ಚಾಲಕರು ಮಿತಿಗಿಂತ ಹೆಚ್ಚು ಮಕ್ಕಳನ್ನು ಕೂರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಚಾಲಕರ ವಿರುದ್ಧ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾನೂನು ಪಾಲನೆ ಹೆಸರಿನಲ್ಲಿ ಅನಗತ್ಯ ದಂಡ, ಪರವಾನಿಗೆ ರದ್ದು ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ. ಮಕ್ಕಳಿಗೆ ತೊಂದರೆಯಾದರೂ ನಾವೇನೂ ಮಾಡುವಂತಿಲ್ಲ. ಟ್ರಿಪ್‌ ಕಡಿತಗೊಳಿಸಿ ಬೇರೆ ಉದ್ಯೋಗ ಹಿಡಿಯುವುದೇ ಪರಿಹಾರ ಎನ್ನುತ್ತಾರೆ ಕಿರಣ್‌ ಲೇಡಿಹಿಲ್‌.

Advertisement

Udayavani is now on Telegram. Click here to join our channel and stay updated with the latest news.

Next