Advertisement

ಕಿಲಬನೂರ ಸಂತ್ರಸ್ತರ ಪ್ರತಿಭಟನೆ

10:51 AM Aug 28, 2019 | Team Udayavani |

ರಾಮದುರ್ಗ: ಪ್ರವಾಹ ಬಂದು ತಿಂಗಳು ಕಳೆದರೂ, ಮನೆ ಬಿದ್ದು ಬೀದಿಗೆ ಬಂದು ಪರಿಹಾರ ಕೇಂದ್ರದಲ್ಲಿ ವಾಸಿಸುವ ನಿರಾಶ್ರಿತರಿಗೆ ತಾತ್ಕಾಲಿಕ ವಸತಿ ನಿರ್ಮಾಣಕ್ಕೆ ಪರಿಹಾರ ಹಣ ನೀಡದ ಹಾಗೂ ತಾತ್ಕಾಲಿಕ 10 ಸಾವಿರ ಪರಿಹಾರ ಧನವೂ ಸಮರ್ಪಕವಾಗಿ ದೊರಕಿಲ್ಲ ಎಂದು ಆರೋಪಿಸಿ ಕಿಲಬನೂರ ಪ್ರವಾಹ ಪೀಡಿತರು ತಹಶೀಲ್ದಾರ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

Advertisement

ಪ್ರವಾಹ ಹಿನ್ನೆಲೆಯಲ್ಲಿ ಕಿಲಬನೂರ ಪ್ರದೇಶದ ‌ಜನತೆ ಸಾಯಿ ನಗರದಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಪ್ರತಿ ದಿನ ಆಹಾರ ತಯಾರಿಕೆಗೆ ತರಕಾರಿ ಸಾಮಗ್ರಿಗಳ ಖರೀದಿಗೆ ಹಣ ನೀಡುತ್ತಿಲ್ಲ ಎಂದು ಪರಿಹಾರ ಕೇಂದ್ರ ನಡೆಸುವ ಸಿಬ್ಬಂದಿ ಹೇಳುತ್ತಿದ್ದಾರೆ. ಹೀಗಾದರೆ ನಮ್ಮಗತಿ ಏನು? ಎಷ್ಟು ದಿನ ಪರಿಹಾರ ಕೇಂದ್ರದಲ್ಲಿಯೇ ಇರುವುದು. ಶೀಘ್ರ ಶೆಡ್‌ ನಿರ್ಮಾಣಕ್ಕೆ ಪರಿಹಾರಧನ ನೀಡಬೇಕು. ನಿರಾಶ್ರಿತರಿಗೆ ತೆರೆದ ಪರಿಹಾರ ಕೇಂದ್ರದಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಕಿಲಬನೂರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಕುಟುಂಬಗಳು ಇದ್ದು, ಜನ ಜಾನುವಾರುಗಳಿಗೆ ತಕ್ಕಂತೆ ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಶೀಲ್ದಾರರು, ಮನೆ ಬಿದ್ದ ಕುರಿತು ಸಂಬಂಧ ಪಟ್ಟ ಇಲಾಖೆಯ ಸಿಬ್ಬಂದಿ ಹಾಗೂ ಎಂಜಿನಿಯರ್‌ಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಸಂಪೂರ್ಣ ಮನೆ ಬಿದ್ದ ಕುಟುಂಬಕ್ಕೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಳ್ಳಲು ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪರಿಹಾರ ಕೇಂದ್ರದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂತ್ರಸ್ತರನ್ನು ಸಮಾಧಾನ ಪಡಿಸಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದುಕೊಂಡರು. ಬಸಪ್ಪ ದೊಡಮನಿ, ನಾಗಪ್ಪ ವಜ್ರಮಟ್ಟಿ, ಬಸಪ್ಪ ಚವಲಾರ ಸೇರಿದಂತೆ ಕಿಲಬನೂರ ಮಹಿಳೆಯರು ಹಾಗೂ ನೂರಾರು ಸಂತ್ರಸ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next