ಕಲಬುರಗಿ: ಮಳೆ ಮತ್ತು ಭೀಮಾ ನದಿ ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಮುಳುಗಡೆಯಾದ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಫಜಲಪುರ ತಾಲೂಕು ಘಟಕದ ಅಧ್ಯಕ್ಷ ರಮೇಶ ಹೂಗಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ಪ್ರತಿಭಟನೆ ಮಾಡಿದರು. ಈ ವೇಳೆ ರೈತರ ಸಮಸ್ಯೆಯನ್ನು ಮೇಲಾಧಿಕಾರಿಗಳೇ ಆಲಿಸಬೇಕು ಹಾಗೂ ಮನವಿ ಪತ್ರವನ್ನು ಸ್ವೀಕರಿಸಬೇಕೆಂದು ಒತ್ತಾಯಿಸಿದರು. ಆದರೆ, ಮೇಲಾಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ಆಕ್ರೋಶಗೊಂಡ ರೈತರು ಕಚೇರಿಗೆ ಮುತ್ತಿಗೆ ಹಾಕಿದರು.
ಭೀಮಾ ನದಿ ಪ್ರವಾಹದಿಂದ ಕಬ್ಬು, ಹತ್ತಿ, ತೊಗರಿ ಸೇರಿ ಎಲ್ಲ ಬೆಳೆಗಳಿಗೆ ಪರಿಹಾರ ನೀಡಬೇಕು ಮತ್ತು ಪ್ರವಾಹದಿಂದ ಮುಳುಗಡೆಯಾದ ಹಳ್ಳಿಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿದ ರೈತರನ್ನು ಸಮಾಧಾನ ಪಡಿಸಿದರು.
ಇದನ್ನೂ ಓದಿ:ರಾಯಚೂರು ನಗರಸಭೆ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದಲೇ ಇಬ್ಬರು ಸ್ಪರ್ಧೆ
ನಂತರ ಅಪರ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಆಗಮಿಸಿ, ರೈತರ ಸಮಸ್ಯೆ ಆಲಿಸಿ ಮನೆ ಹಾನಿ ಪರಿಹಾರ ಪ್ರತಿಕ್ರಿಯೆ ನಡೆಯುತ್ತಿದೆ ಎಂದು ಸಮಜಾಯಿಷಿ ನೀಡಿದರು. ಆದರೆ, ರೈತರು ನಮಗೆ ಇಲ್ಲಿಯವರೆಗೂ ಪರಿಹಾರ ತಲುಪಿಲ್ಲ. ಜಿಲ್ಲಾಧಿಕಾರಿಗಳೇ ಬಂದು ಭೇಟಿ ಮಾಡಬೇಕೆಂದು ಪಟ್ಟು ಹಿಡಿದರು. ಕೊನೆಗೆ ಜಿಲ್ಲಾಧಿಕಾರಿಗಳೊಂದಿಗೆ ಕೆಲ ರೈತ ಮುಖಂಡರನ್ನು ಮಾತ್ರ ಭೇಟಿ ಮಾಡಿಸುವುದಾಗಿ ಅಪರ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದರು.