Advertisement

ಮನೆ ರಸ್ತೆ ಸಂಪರ್ಕಕ್ಕಾಗಿ ಗ್ರಾಪಂ ಕಚೇರಿ ಮುಂದೆ ಧರಣಿ

05:29 PM Jun 27, 2022 | Team Udayavani |

ಕೋಲಾರ: ಮನೆಗೆ ರಸ್ತೆ ಸೌಕರ್ಯವಿಲ್ಲದೆ ಹಲವು ವರ್ಷಗಳಿಂದ ಓಡಾಟಕ್ಕೆ ತೊಂದರೆ ಆಗಿದ್ದು, ಬಗೆಹರಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಗ್ರಾಪಂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿ ಕಚೇರಿ ಎದುರು ಕುಟುಂಬವೊಂದು ಒಲೆ ಇಟ್ಟು ಪ್ರತಿಭಟಿಸಿದ ಘಟನೆ ತಾಲೂಕಿನ ಚೌಡದೇನಹಳ್ಳಿಯಲ್ಲಿ ನಡೆದಿದೆ.

Advertisement

ತಾಲೂಕಿನ ಚೊಕ್ಕಪುರ ಗ್ರಾಮದ ಶ್ರೀನಿವಾಸಪ್ಪ, ಶಾಂತಮ್ಮ ಹಾಗೂ ಗಂಗಾಧರ್‌ ಕುಟುಂಬವು ಚೌಡದೇನಹಳ್ಳಿ ಗ್ರಾಪಂ ಕಚೇರಿ ಎದುರು ಪಾತ್ರೆಗಳ ಸಮೇತ ಆಗಮಿಸಿ ಟಾರ್ಪಲ್‌ ಕಟ್ಟಿ, ಒಲೆ ಇಟ್ಟು ಅಡುಗೆ ಮಾಡಲು ಆರಂಭಿಸಿದರು. ನಮ್ಮ ಮನೆಗೆ ರಸ್ತೆ ಸೌಕರ್ಯ ಒದಗಿಸುವವರೆಗೂ ಜಾಗ ಬಿಟ್ಟು ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದ್ದ ರಸ್ತೆಗೆ ಕಲ್ಲು ನೆಟ್ಟು ಅಡ್ಡಿ: ಈ ವೇಳೆ ಮಾತನಾಡಿದ ಕುಟುಂಬದ ಸದಸ್ಯರು, ಚೊಕ್ಕಪುರದ ತಮ್ಮ ಮನೆಗೆ ರಸ್ತೆ ಸೌಕರ್ಯ ಇಲ್ಲದ ಕಾರಣ ಓಡಾಡಲು ಆಗುತ್ತಿಲ್ಲ. ಪಕ್ಕದ ಮನೆಗಳವರು ಓಡಾಟಕ್ಕೆ ಕಲ್ಲುಗಳನ್ನು ಅಡ್ಡ ಹಾಕಿದ್ದಾರೆ. 2019ರಿಂದಲೂ ಹಲವು ಬಾರಿ ಗ್ರಾಪಂ ಅಧಿ ಕಾರಿಗಳಲ್ಲದೆ, ಅಂದಿನ ತಾಪಂ ಅಧ್ಯಕ್ಷರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ನೀರುಗಂಟಿಯಿಂದ ಹಲ್ಲೆ: ನೀರುಗಂಟಿ ಮುನಿಯಪ್ಪ ತೀವ್ರ ತೊಂದರೆ ನೀಡುತ್ತಿದ್ದು, ತಮ್ಮ ಸಂಬಂಧಿಕರನ್ನು ಕರೆತಂದು ಹಲ್ಲೆ ಮಾಡಿಸುತ್ತಾನೆ. ನ್ಯಾಯ ಪಂಚಾಯ್ತಿ ವೇಳೆ ಎಲ್ಲದಕ್ಕೂ ಒಪ್ಪಿಕೊಂಡು, ಬಳಿಕ ಅದೇ ರೀತಿ ಗಲಾಟೆ ಮಾಡಿ ಹಲ್ಲೆ ನಡೆಸುತ್ತಿದ್ದಾನೆ. ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿ, ಸಮಸ್ಯೆ ಬಗೆಹರಿಸುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಹೇಳಿದರು.

ಪೊಲೀಸರಿಂದ ಧರಣಿನಿರತ ತೆರವು: ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವೇಮಗಲ್‌ ಠಾಣೆ ಪೊಲೀಸರು, ಸರ್ಕಾರಿ ಕಚೇರಿ ಎದುರು ಈ ರೀತಿ ಮಾಡುವುದು ಸರಿಯಲ್ಲ. ಸಮಸ್ಯೆಯಿರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುತ್ತಿದ್ದೆವು. ಏಕಾಏಕಿ ಗ್ರಾಪಂ ಎದುರು ಒಲೆ ಇಟ್ಟು ನಡೆಸುವುದು ಸರಿಯಲ್ಲ ಎಂದು ತೆರವುಗೊಳಿಸಿದರು.

Advertisement

ನಕಾಶೆ ಬಂದ ತಕ್ಷಣ ಸೌಲಭ್ಯ: ಸ್ಥಳದಲ್ಲಿದ್ದ ಪಿಡಿಒ ಮುನಿರಾಜು, ನನಗೆ ಮೌಖೀಕವಾಗಿ ವಿಚಾರವನ್ನು ತಿಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಾಪಂನಲ್ಲಿ ನಕಾಶೆ ಪಡೆಯಲು ಪತ್ರ ಬರೆದು ಕುಟುಂಬ ಸದಸ್ಯರನ್ನು ಕರೆದುಕೊಂಡು ಹೋಗಿ ಮನವಿ ಸಲ್ಲಿಸಲಾಗುವುದು. ನಕಾಶೆ ಬಂದ ಕೂಡಲೇ ಅಧಿ ಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಮಹಜರು ನಡೆಸಿ, ರಸ್ತೆ ಸೌಕರ್ಯ ಕಲ್ಪಿಸುವ ಭರವಸೆ ನೀಡಿದರು. ಬಳಿಕ ಪರಿಸ್ಥಿತಿ ತಿಳಿಗೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next