ಕಲಬುರಗಿ: ನಗರದ ಬಹುಮನಿ ಕೋಟೆಯ ಪ್ರದೇಶದಲ್ಲಿರುವ ಶಿವಲಿಂಗ ದೇವಸ್ಥಾನವನ್ನು ಪುನಃಶ್ಚೇತನಗೊಳಿಸಬೇಕು ಮತ್ತು ಕೋಟೆ ಪ್ರದೇಶದಲ್ಲಿರುವ ಜನರನ್ನು ಹೊರ ಹಾಕಬೇಕು ಎಂದು ಒತ್ತಾಯಿಸಿ ಹಿಂದು ಜಾಗೃತ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ಮಾಡಿದರು.
ಬಹುಮನಿ ಕೋಟೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಾರಂಗಲ್ಲಿನ ಕಾಕತೀಯರು, ದೇವಗಿರಿಯ ಯಾದವರು ಮತ್ತು ರಾಷ್ಟ್ರಕೂಟರು, ಚಾಲುಕ್ಯರು ಆಳಿದ್ದಾರೆ. ಒಂದೊಮ್ಮೆ ವಿಜಯನಗರದ ಕೃಷ್ಣದೇವರಾಯನೂ ಕೂಡ ಯುದ್ಧ ಮಾಡಿ ಗೆದ್ದು ಸ್ವಲ್ಪ ದಿನ ಆಳಿದ್ದಾನೆ. ಕೋಟೆಯ ಈಶಾನ್ಯ ಮೂಲೆಯಲ್ಲಿ ಸ್ವಯಂ ಭು ಸೋಮೇಶ್ವರ ದೇವಾಲಯವಿದೆ. ದೇವಸ್ಥಾನದಲ್ಲಿ ಲಭ್ಯ ಇರುವ ಶಿಲ್ಪ ವಿನ್ಯಾಸದಲ್ಲಿ ಗಣೇಶ, ನಂದಿ, ಶಿವ-ಪಾರ್ವತಿ, ನವಿಲಿನ ಶಿಲಾಮೂರ್ತಿಗಳಿವೆ. ಹಿಂದೂ ಧರ್ಮಕ್ಕೆ ಹೊಲುವ ಎಲ್ಲ ಕುರುಹುಗಳು ಇಲ್ಲಿವೆ. ದುರಾದೃಷ್ಟವೆಂದರೆ ಬಹುಮನಿಯ ರಾಜರ ಆಳ್ವಿಕೆಯಲ್ಲಿ ಇವೆಲ್ಲವೂ ಮೂಲೆಗುಂಪಾಗಿ ಹಾಳಾಗಿವೆ. ಅವುಗಳನ್ನು ಪುನಃ ಶ್ಚೇತನ ಮಾಡುವ ಕೆಲಸ ಆಗಬೇಕು. ಕೂಡಲೇ ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿ ದೇವಾಲಯವನ್ನು ಸಾರ್ವಜನಿಕ ವೀಕ್ಷಣೆ, ಪೂಜೆ ಪುನಸ್ಕಾರಗಳಿಗೆ ಯೋಗ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಕೋಟೆ ಪುರಾತತ್ವ ಇಲಾಖೆಗೆ ಸಂಬಂಧಿಸಿದ್ದರೂ, ಕೋಟೆಯೊಳಗೆ ಬಹುಮನಿ ರಾಜರ ವಂಶಸ್ಥರು ಎಂದು ಹೇಳಿಕೊಂಡು ವಾಸವಿರುವ ಜನರನ್ನು ಹೊರ ಹಾಕಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದ ಲಕ್ಷ್ಮಿಕಾಂತ ಎಸ್ ಸಾದ್ವಿ, ಜಿಲ್ಲಾ ಘಟಕದ ಸುನೀಲ ಶಿರ್ಕೆ, ವಿದ್ಯಾರ್ಥಿ ಘಟಕದ ಪವನ ಕದಂ, ಸಂತೋಷ ಸೋನಾವಣೆ, ದಶರಥ ಇಂಗಳಗಿ, ಮಹಾದೇವ ಕೋಟನೂರು, ಸಂಜನಾ ಮಂಗಳಮುಖೀ, ಸಂಗು ಕಾಳನೂರು, ರಮೇಶ ಆಳ್ಳೊಳ್ಳಿ, ಹಣಮಂತ ಪೂಜಾರಿ, ಗುರುಸ್ವಾಮಿ ಹಿರೇಮಠ, ಚಿದಾನಂದ ಸ್ವಾಮಿ, ಉದಯಕುಮಾರ ಇತರರು ಇದ್ದರು.