ಮಂಡ್ಯ: ಜಿಲ್ಲೆಯಲ್ಲಿ ಸತ್ಯ, ನ್ಯಾಯ, ಕಾನೂನು ಸುವ್ಯವಸ್ಥೆ ಹಾಗೂ ಉಳುಮೆ ಸಂಸ್ಕೃತಿ ಉಳಿವಿಗಾಗಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿ ಜಿಲ್ಲೆಯ ಸೌಹಾರ್ದತೆಗೆ ದಕ್ಕೆ ತರುತ್ತಿರುವ ಕೋಮುವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆಳುವ ಸರ್ಕಾರ, ಆರ್ಎಸ್ಎಸ್, ಬಿಜೆಪಿ, ಜೆಡಿಎಸ್ ನ ಸಂಚುಕೋರರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ರಾಷ್ಟ್ರಕವಿ ಕುವೆಂಪು ಹೇಳಿದಂತೆ ಮಂಡ್ಯ ಜಿಲ್ಲೆಯ ಜನತೆಗೆ ಧರ್ಮವೇ ದುಡಿಮೆ, ಹಸಿರೇ ಉಸಿರು. ಇಂತಹ ಪವಿತ್ರ ಧರ್ಮವನ್ನು ಪಲ್ಲಟಗೊಳಿಸುವ, ಉಸಿರು ಕಟ್ಟಿಸುವ ಘಟನಾವಳಿ ಜಿಲ್ಲೆಯಲ್ಲಿ ನಡೆಯುತ್ತಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಮದ್ದೂರಿನ ಶಿವಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಬ್ರಿಟಿಷ್ ವಸಾಹತು ಸುಲಿಗೆಕೋರರಿಗೆ ಜಿಲ್ಲೆಯ ಸ್ವಾತಂತ್ರ್ಯ ವೀರರು ಸವಾಲು ಹಾಕಿದ ವೇಳೆ ಕೇಸರಿ ಬಾವುಟ ಹಿಡಿದು ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡಿದ್ದ ಸಂತತಿ ಇದೀಗ ತ್ರಿವರ್ಣ ಧ್ವಜವನ್ನು ತಿರಸ್ಕಾರದಿಂದ ನೋಡುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ ಎಂದು ಕಿಡಿಕಾರಿದರು.
ಜಿಲ್ಲೆಯ ಜನರ ಧರ್ಮ ಉಳುಮೆ. ಉಳುಮೆಯ ಆಚರಣೆಯಿಂದ ಕಟ್ಟಿಕೊಂಡ ಬದುಕು, ಈಗ ಉಳುಮೆಯ ಧರ್ಮವನ್ನು ಮೂಲೆಗೆ ತಳ್ಳಿ ಬಾವುಟ ಧರ್ಮವನ್ನು ಮುಂದೆ ಮಾಡಲಾಗಿದೆ. ಧರ್ಮ ಮತ್ತು ದೇವರನ್ನು ಮತ ಬಾಚಿಕೊಳ್ಳುವ ಸಾಧನ ಮಾಡಿಕೊಂಡು, ಅಧಿಕಾರದ ಗದ್ದುಗೆ ಏರಲು ಜನರ ಬದುಕನ್ನು ಮೆಟ್ಟಿಲು ಮಾಡಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆರಗೋಡು ಗ್ರಾಮದಲ್ಲಿ ಎಲ್ಲಾ ಜಾತಿಯ ಜನರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಶತಮಾನಗಳಿಂದ ಸಾಮರಸ್ಯದ ಜೀವನ ನಡೆಸುತ್ತಾ ಬಂದಿದ್ದಾರೆ. ಕಟ್ಟೆಮನೆಯ ನಿಷ್ಠುರ ನ್ಯಾಯ ದಿಂದ ಕೆರಗೋಡು ಹೆಸರುವಾಸಿ ಪಡೆದಿದೆ. ಆದರೆ ಇತ್ತೀಚಿನ ಧ್ವಜ ವಿವಾದ ಕೆರಗೋಡಿನ ಶಾಂತಿ, ಸಹಬಾಳ್ವೆ ಬದುಕಿಗೆ ಬೆಂಕಿ ಇಟ್ಟಿದೆ. ಹಬ್ಬ ಹರಿದಿನಗಳಲ್ಲಿ, ಮದುವೆ ಸಂಭ್ರಮಗಳಲ್ಲಿ ಹಸಿರು ಚಪ್ಪರ ತಳಿರು ತೋರಣಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದ ಸ್ಥಳಗಳು ಇದೀಗ ಭೀಕರ ವಾತಾವರಣ ನಿರ್ಮಾಣವಾಗಿದೆ. ಮೇಲುನೋಟಕ್ಕೆ ಧಾರ್ಮಿಕ ಆಚರಣೆಯಂತೆ ಕಾಣುವ ಇಂತಹ ದುರ್ಘಟನೆಯ ಹಿಂದೆ ಮತೀಯ ಹಾಗೂ ಜಾತಿ ಗಲಭೆಗಳನ್ನು ಸೃಷ್ಟಿಸಿ ಚುನಾವಣಾ ಲಾಭ ಪಡೆಯುವ ಬಿಜೆಪಿ ಮತ್ತು ಜೆಡಿಎಸ್ನ ಹುನ್ನಾರ ಅಡಗಿದೆ ಎಂದು ದೂರಿದರು.
ಹಿರಿಯ ಸಾಹಿತಿ ದೇವನೂರು ಮಹಾದೇವ್, ಪ್ರೊ.ಕಾಳೇಗೌಡ ನಾಗವಾರ, ಜಿ.ಎನ್.ನಾಗರಾಜ್, ರಾಮಚಂದ್ರಪ್ಪ, ಜಗದೀಶ್ ಕೊಪ್ಪ, ಎಂ.ಮಾಯಿಗೌಡ, ಗಾಯಕ ಜನಾರ್ಧನ್, ಆನಂತ್ ನಾಯಕ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರೈತನಾಯಕಿ ಸುನಂದ ಜಯರಾಮ್, ಎ.ಎಲ್.ಕೃಷ್ಣೇಗೌಡ, ಸುರೇಂದ್ರ ಕೌಲಗಿ, ಪ್ರೊ.ಹುಲ್ಕೆರೆ ಮಹದೇವ್, ಕರ್ನಾಟಕ ರಾಜ್ಯ ರೈತಸಂಘದ ಬಡಗಲ ಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೇಗೌಡ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪುಟ್ಟಮಾದು ಸೇರಿದಂತೆ ನೂರಾರು ಪ್ರಗತಿಪರ ಸಂಘಟನೆಗಳ ಮುಖಂಡರಿದ್ದರು.