ಕಲಬುರಗಿ: ನಗರದಲ್ಲಿ ಅಂಗಡಿ ಮುಂಗಟ್ಟಿನಲ್ಲಿ ಕನ್ನಡದಲ್ಲಿ ನಾಮಫಲಕ ಬರೆಯಿಸದೇ, ಇಂಗ್ಲಿಷ್‌ನಲ್ಲಿ ಹಾಕಿದ್ದ ನಾಮಫಲಕಗಳಿಗೆ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ(ಗೌಡ ಬಣ) ಕಾರ್ಯಕರ್ತರು ಕಪ್ಪು ಮಸಿ ಬಳಿದು ಪ್ರತಿಭಟನೆ ನಡೆಸಿದರು.
ಈ ಹಿಂದೆಯೇ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಅಂಗಡಿಗಳು ಹಾಗೂ ಮಾಲ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಫಲಕಗಳನ್ನು ಬರೆಸುವಂತೆ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೇ, ಗಡುವು ನೀಡಲಾಗಿತ್ತು. ಈಗ ಗಡುವು ಮುಗಿದಿದೆ. ಅದರೆ, ಈ ಕುರಿತು ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಬಹುತೇಕ ಅಂಗಡಿ ಮುಂಗಟ್ಟಿನಲ್ಲಿ ಇಂಗ್ಲಿಷ್ ಅಕ್ಷರಗಳು ರಾರಾಜಿಸುತ್ತಿವೆ. ಈ ನಿಟ್ಟಿನಲ್ಲಿ ನಗರದ ತಿಮ್ಮಾಪುರ ವೃತ್ತದಲ್ಲಿನ ಕೆಲವು ವಾಣಿಜ್ಯ ಮಳಿಗೆ ಮುಂಗಟ್ಟಿನಲ್ಲಿದ್ದ ಇಂಗ್ಲಿಷ್ ನಾಮಫಲಕಕ್ಕೆ ಮಸಿ ಬಳಿದು ಪ್ರತಿಭಟನೆ ಮಾಡಲಾಯಿತು ಎಂದು ಕಲಬುರಗಿ ತಾಲೂಕು ಘಟಕದ ಅಧ್ಯಕ್ಷ ಆನಂದ ಎಸ್. ದೊಡ್ಡಮನಿ ತಿಳಿಸಿದರು.
ಕನ್ನಡದ ಅನ್ನ ಉಂಡು, ನೀರು ಕುಡಿದು, ಗಾಳಿ ಸೇವಿಸಿ ಕನ್ನಡದ ಅಕ್ಷರಗಳನ್ನು ಅಂಗಡಿ ಮುಂಗಟ್ಟಿನಲ್ಲಿ ಹಾಕಿಕೊಳ್ಳದೇ ನಾಡ ಭಾಷೆಗೆ ಅವಮಾನ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಘಟಕ ಅಧ್ಯಕ್ಷ ಸಿದ್ಧು ಪೂಜಾರಿ, ನಗರ ಪ್ರಧಾನ ಕಾರ್ಯದರ್ಶಿ ಸುರೇಶ ಬಿ. ಹೊಸಮನಿ, ತಾರಫೈಲ್ ವಾರ್ಡ್ ಅಧ್ಯಕ್ಷ ಸಾಗರ ಡಿ. ಅಬಿಶಾಳ, ರುಫ್, ಜಗದೀಶ, , ಅಶೋಕ ಗುತ್ತೇದಾರ ಹಾಗೂ ಕಾರ್ಯಕರ್ತರು ಇದ್ದರು.