ದಾವಣಗೆರೆ: ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳಲ್ಲಿನ ನೇರ ಪಾವತಿ ಪೌರ ಕಾರ್ಮಿಕರ ಖಾಯಂ ಯಾತಿ, ಗೃಹಯೋಜನೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪೌರ ಕಾರ್ಮಿಕರು ಸುರಿಯುವ ಮಳೆಯ ನಡುವೆಯೇ ಪೊರಕೆಗಳೊಂದಿಗೆ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಹಾತ್ಮಗಾಂಧಿ ವೃತ್ತ, ಮಹಾನಗರ ಪಾಲಿಕೆ ಮೂಲಕ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಎಲ್.ಎಂ. ಹನುಮಂತಪ್ಪ ಮಾತನಾಡಿ, ರಾಜ್ಯ ಸರ್ಕಾರ ನೇರಪಾವತಿ ಪೌರ ಕಾರ್ಮಿಕರ ಕಾಯಯಾತಿ, ಗೃಹಯೋಜನೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಒಳಗೊಂಡಂತೆ ನಮ್ಮ 9 ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲವಾದ್ದಲ್ಲಿ ರಾಜ್ಯದ ಎಲ್ಲ ನಗರಪಾಲಿಕೆ, ನಗರಸಭೆ, ಪುರಸಭೆಯಲ್ಲಿ ಸ್ವಚ್ಛತೆ, ಒಳಚರಂಡಿ ಎಲ್ಲ ಕೆಲಸ- ಕಾರ್ಯ ಸ್ಥಗಿತಗೊಳಿಸಿ ಮೇ 30ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೃಹಭಾಗ್ಯ ಯೋಜನೆಯಡಿ 3-4 ವರ್ಷಗಳಿಂದ ಮನೆ ಕಟ್ಟುತ್ತಲೇ ಇದ್ದಾರೆ. ಫಲಾನುಭವಿಗಳ ಪೈಕಿ ಕೆಲವರು ಈಗಾಗಲೇ ಸತ್ತೇ ಹೋಗಿದ್ದಾರೆ. ಆದರೂ, ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಕೂಡಲೇ ಮನೆಗಳ ಕಟ್ಟಿಸಿ, ಹಕ್ಕುಪತ್ರಗಳನ್ನು ವಿತರಣೆ ಮಾಡಬೇಕು. ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ನೇರಪಾವತಿ ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗಿದೆ. ಅದೇ ಮಾದರಿಯಲ್ಲೇ ಬಿಜೆಪಿ ಸರ್ಕಾರ ಖಾಯಂ ಮಾಡಬೇಕು. ಸರ್ಕಾರವೇ ಗುತ್ತಿಗೆ ಪದ್ದತಿ ರದ್ಧು ಎನ್ನುತ್ತದೆ. ಇನ್ನೊಂದು ಕಡೆ ಗುತ್ತಿಗೆ ಪದ್ಧತಿಯಡಿ ಪೌರಕಾರ್ಮಿಕರ ನೇಮಕ ಮಾಡುತ್ತದೆ. ಒಳಚರಂಡಿ ಸಹಾಯಕರು, ನೀರಗಂಟಿ, ಲೋಡರ್, ಕ್ಲೀನರ್, ಹೆಲ್ಪರ್, ಸ್ಮಶಾನ ಕಾವಲುಗಾರ ಗುತ್ತಿಗೆ ಪದ್ಧತಿ ರದ್ಧುಪಡಿಸಿ, ಖಾಯಂ ಮಾಡಬೇಕು. ಮರಣ ಹೊಂದಿದ ನೇರಪಾವತಿ ಪೌರ ಕಾರ್ಮಿಕರ ಮಕ್ಕಳನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು. ಆರು ತಿಂಗಳು ಸಂಬಳ ಇಲ್ಲದೆ ಕೆಲಸ ಮಾಡಿರುವ 89 ಕಾರ್ಮಿಕರನ್ನೂ ನೇಮಕ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಎನ್. ನೀಲಗಿರಿಯಪ್ಪ, ಎಲ್.ಎಚ್. ಸಾಗರ್, ಜಿ. ಬಸವರಾಜ್, ಎಸ್. ಸಂದೀಪ್, ಬಿ. ರಾಜು ಇತರರು ನೇತೃತ್ವ ವಹಿಸಿದ್ದರು.