Advertisement
ಕಸ್ತೂರಿ ರಂಗನ್ ವರದಿಯಿಂದ ಹೆಚ್ಚು ಬಾಧಿತವಾಗುವ ಹೊಂಗಡಹಳ್ಳ, ಹೆತ್ತೂರು, ಹೆಗ್ಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ಸಂಪೂರ್ಣ ಚುನಾವಣೆ ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದರಿಂದ ಚುನಾವಣೆಗಾಗಿ ಸಿದ್ಧತೆ ನಡೆಸಿದ್ದ ಅಕಾಂಕ್ಷಿಗಳಿಗೆ ಬೇಸರ ತಂದಿದೆ. ಇನ್ನು ಕಸ್ತೂರಿ ರಂಗನ್ ವರದಿಯಲ್ಲಿ ದೇವಾಲದಕೆರೆ, ಹಾನುಬಾಳ್, ಕ್ಯಾನಹಳ್ಳಿ ಪಂಚಾಯ್ತಿಯ ಕೆಲವು ಗ್ರಾಮಗಳು ಸೇರ್ಪಡೆಗೊಂಡಿದ್ದರೂ ಈ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರದ ಆಶ್ವಾಸನೆ ನಂಬಿ ಚುನಾವಣೆ ಬಹಿಷ್ಕರಿಸುವ ನಿರ್ಧಾರವನ್ನು ಗ್ರಾಮಸ್ಥರು ಹಿಂಪಡೆದಿದ್ದಾರೆ. ತಾಲೂಕಿನಲ್ಲಿ ಒಟ್ಟು26 ಗ್ರಾಪಂಗಳಿದ್ದು, ಇದರಲ್ಲಿ ವನಗೂರು ಮತ್ತು ಉಚ್ಚಂಗಿ ಗ್ರಾಪಂ ಹೊರತು ಉಳಿದ 24 ಗ್ರಾಪಂಗಳಿಗೆ ಚುನಾವಣೆ ನಡೆಯುತ್ತಿದೆ.
Related Articles
Advertisement
ಈ ಪಂಚಾಯ್ತಿ ವ್ಯಾಪ್ತಿಗೆ ಸೇರುವ ಬೊಬ್ಬನಹಳ್ಳಿ ಕ್ಷೇತ್ರ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಇಲ್ಲಿ ಬಿಜೆಪಿ ಬೆಂಬಲಿತ ಶಾರದಾ ಪರಮೇಶ್ವರ್ ನಾಯಕ್ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆ ಖಚಿತವಾಗಿದೆ.
ನಾಮಪತ್ರ ವಾಪಸ್‌ಗೆ ಮನವೊಲಿಕೆ: ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಅಂತಿಮ ದಿನವಾ ಗಿತ್ತು. ಹೆತ್ತೂರು ಹೋಬಳಿಯ ವಳಲಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾತ್ರ ನಾಮಪತ್ರ ಸಲ್ಲಿಕೆ ಆಗಿದ್ದು, ನಾಮಪತ್ರ ಹಿಂಪಡೆಯುವಂತೆ ಕೆಲ ಗ್ರಾಮಸ್ಥರು ಆಕಾಂಕ್ಷಿಗಳ ಮನವೊಲಿಕೆ ಮಾಡುತ್ತಿದ್ದಾರೆ. ಸೋಮವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಪೊಲೀಸರು ಧ್ವನಿವರ್ದಕದ ಮೂಲಕ ಧೈರ್ಯವಾಗಿ ನಾಮಪತ್ರ ಸಲ್ಲಿಸುವಂತೆ ಹೆತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಮನವಿ ಮಾಡಿದ್ದರೂ ನಾಮಪತ್ರ ಸಲ್ಲಿಸಲು ಮುಂದಾಗಿಲ್ಲ. ಇದರಿಂದಾಗಿ ಈ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಚುನಾವಣೆ ರದ್ದಾಗುವುದು ಖಚಿತವಾಗಿದೆ.
ಕಸ್ತೂರಿ ರಂಗನ್ ವರದಿ ಹೆತ್ತೂರು ಹೋಬಳಿ ಜನತೆಗೆ ಮಾರಕವಾಗಿದೆ. ನಮಗೆ ಚುನಾವಣೆ ಮುಖ್ಯವಲ್ಲ,ಜೀವನ ಮುಖ್ಯ. ಹೆತ್ತೂರು ಹಾಗೂ ಹೊಂಗಡಹಳ್ಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ನಾಮಪತ್ರ ಚುನಾವಣೆಗೆ ಸಲ್ಲಿಕೆಯಾಗಿಲ್ಲ. -ಸಚ್ಚಿನ್, ಹೆತ್ತೂರು ಹೋಬಳಿ ಬೆಳೆಗಾರರ ಸಂಘ
ಗ್ರಾಮಸ್ಥರ ತೀರ್ಮಾನದಂತೆ ನಾವು ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನ ಕೈಗೊಂಡಿದ್ದೇನೆ. ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಚುನಾವಣೆಗಿಂತ ಜನರ ಹಿತವೇ ಮುಖ್ಯ. –ಕೃಷ್ಣಪ್ಪ, ಗ್ರಾಪಂ ಟಿಕೆಟ್ ಅಕಾಂಕ್ಷಿ, ಹೆತ್ತೂರು ಎ. ಬ್ಲಾಕ್
–ಸುಧೀರ್ ಎಸ್.ಎಲ್