ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಖಾಸಗೀ ಕರಣ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಿ ರುವ ಕ್ರಮವನ್ನು ವಾಪಸ್ ಪಡೆಯದಿದ್ದರೆ, ವಿಧಾನಸೌಧ ಮುಂದೆ ಹೋರಾಟ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಎಚ್ಚರಿಕೆ ನೀಡಿದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆವಹಿಸಿದ್ದ ಅವರು ಮಾತನಾಡಿ, ಕೂಡಲೇ ಸರ್ಕಾರ ಮೈಷುಗರ್ ಕಾರ್ಖಾನೆ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಹೇಳಿದರು.
ರೈತರ ಹಿತ ಕಾಪಾಡಿ: ಜಿಲ್ಲೆಯ ಎಲ್ಲ ತಾಲೂಕಿನ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಕಾಯ್ದೆಯನ್ನು ವಾಪಸ್‌ಪಡೆಯುವಂತೆ ಸದನದಲ್ಲಿ ಒತ್ತಾಯಿಸಬೇಕು. ಕಾರ್ಖಾನೆಯನ್ನುಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಂಡು ರೈತರಹಿತಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ: ಸಭೆಯ ನಂತರ ಆರ್.ಪಿ.ರಸ್ತೆಯಲ್ಲಿ ಜಮಾವಣೆಗೊಂಡ ಮುಖಂಡರು, ಜಿ.ಮಾದೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿರುವ ಪ್ರತಿ ಜತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಕೃಷಿ, ಎಪಿಎಂಸಿ, ಭೂ ಸುಧಾರಣೆಕಾಯ್ದೆ ಹಾಗೂ ರಾಜ್ಯ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆಗಳ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಇಂತಹ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ರೈತ ನಾಯಕಿ ಸುನಂದ ಜಯರಾಂ, ರೈತ ಮುಖಂಡರಾದ ಕೆ. ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕಿರಂಗೂರು ಪಾಪು,ಮುದ್ದೇಗೌಡ, ಪಿ.ಕೆ.ನಾಗಣ್ಣ, ಹಿರಿಯ ಸಹಕಾರಿ ಕೀಲಾರ ಕೃಷ್ಣ,ದಸಂದ ಮುಖಂಡ ಎಂ.ಬಿ.ಶ್ರೀನಿವಾಸ್, ಸಿಐಟಿಯು ಸಿ.ಕುಮಾರಿ,ಸೋಮಶೇಖರ್, ಕರ್ನಾಟಕ ಪ್ರಾಂತ ರೈತ ಸಂಘದ ಟಿ.ಯಶವಂತ ಸೇರಿದಂತೆ ಮತ್ತಿತರರು ಹಾಜರಿದ್ದರು.