Advertisement
ಶುಕ್ರವಾರ ಗೃಹ ಕಚೇರಿ “ಕೃಷ್ಣಾ’ದಲ್ಲಿ ಹೋರಾಟಗಾರರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸಂಧಾನ ಸಭೆ ಫಲಪ್ರದವಾಗಿದ್ದು, ಇದರಿಂದ ತೃಪ್ತರಾಗಿರುವ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದಾರೆ.
ಪ್ರತಿಭಟನೆಯ ಎರಡನೇ ದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಚಿತ ವೇತನ 8 ಸಾವಿರ ರೂ. ನೀಡುವ ಬದಲಾಗಿ 9,500 ರೂ. ಮುಂಗಡ ಹಣ ನೀಡಲು ಮುಂದಾಗಿದ್ದರು. ಇದರಿಂದ ಸಮಾಧಾನಗೊಳ್ಳದ ಆಶಾ ಕಾರ್ಯಕರ್ತೆಯರು ಮುಷ್ಕರ ಮುಂದುವರಿಸಿದ್ದರು. ಪ್ರತಿಭಟನ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾ ಡಾ| ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು. ಕೊನೆಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಭೇಟಿ ನೀಡುವ ಮುನ್ನ ಹೋರಾಟಗಾರರೊಂದಿಗೆ ಸಂಧಾನ ಸಭೆ ನಡೆಸಿದರಲ್ಲದೆ, ಅವರ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆ ನೀಡಿದರು. ಜತೆಗೆ ಮಾಸಿಕ 10 ಸಾವಿರ ರೂ.ಗಳ ನಿಶ್ಚಿತ ಗೌರವಧನ ಸಿಗುವಂತೆ ಮಾಡುವ ಆಶ್ವಾಸನೆಯನ್ನೂ ನೀಡಿದರು. ಇದರಿಂದ ಸಮಾಧಾನಗೊಂಡ ಆಶಾ ಕಾರ್ಯಕರ್ತೆಯರು ಸರಕಾರಕ್ಕೆ ಕೃತಜ್ಞತೆ ತಿಳಿಸಿ, ಪ್ರತಿಭಟನೆ ಹಿಂಪಡೆದರು.
Related Articles
ಸದ್ಯ ಆಶಾ ಕಾರ್ಯಕರ್ತರ ವೇತನ ಪರಿಷ್ಕರಣೆ ಹಾಗೂ ರಜೆಗೆ ಸಂಬಂಧಿಸಿ ಮಾತ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಉಳಿದ ಬೇಡಿಕೆಗಳು ಚರ್ಚೆ ಹಂತದಲ್ಲಿಯೇ ಉಳಿದಿವೆ. ಜತೆಗೆ ಬಜೆಟ್‌ನಲ್ಲಿ ವೇತನ ಹೆಚ್ಚಳ ಹಾಗೂ ಪೂರ್ವಭಾವಿ ಸಭೆಗೆ ಸಂಘವನ್ನು ಆಹ್ವಾನಿಸುವುದಾಗಿ ಭರವಸೆ ನೀಡಲಾಗಿದೆ.
Advertisement