Advertisement

‘ತುಳುವಿಗೆ ಸಂವಿಧಾನ ಮಾನ್ಯತೆ ಸಿಗಲು ಇಚ್ಛಾಶಕ್ತಿ ಕೊರತೆ’

02:49 PM Dec 13, 2018 | |

ಬೆಳ್ತಂಗಡಿ: ಸಾಂಸ್ಕೃತಿಕವಾಗಿ ತುಳು ಭಾಷೆ ಹೆಚ್ಚು ಶ್ರೀಮಂತವಾಗಿದ್ದರೂ ತುಳುವನ್ನು ದೇಶದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ನಮ್ಮನ್ನಾಳುವವರ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ. ಹೀಗಾಗಿ ಅವರಲ್ಲಿ ಎಚ್ಚರ ಹುಟ್ಟಿಸಲು ಇಂತಹ ಧರಣಿ ಸತ್ಯಾಗ್ರಹಗಳು ಅನಿವಾರ್ಯ ಎಂದು ತುಳು ಸಾಹಿತಿ ಉದಯ ಧರ್ಮಸ್ಥಳ ಹೇಳಿದರು.

Advertisement

ಅವರು ಬುಧವಾರ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ  ಹಾಗೂ ಕರ್ನಾಟಕ ಹಾಗೂ ಕೇರಳಗಳ ಅಧಿಕೃತ ಆಡಳಿತ ಭಾಷೆಯಲ್ಲಿ ತುಳುವಿಗೂ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಬೆಳ್ತಂಗಡಿ ತುಳುನಾಡು ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಒಂದು ದಿನದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.

ಈ ಹಿಂದೆ ವಿಶ್ವಸಂಸ್ಥೆ ನೀಡಿದ ಅಳಿವಿನಂಚಿನ 196 ಭಾಷೆಗಳ ಪಟ್ಟಿನಲ್ಲಿ ತುಳು ಹಾಗೂ ಕನ್ನಡ ಸೇರಿದ್ದು, ಬಳಿಕ ತುಳುವಿನ ಇತಿಹಾಸ ಏನು ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗಿತ್ತು. ತುಳುವಿಗೆ ಸ್ವಂತ ಲಿಪಿ ಇಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿದ್ದು, ಆದರೆ ತುಳುವಿಗೂ ಅದರದ್ದೇ ಲಿಪಿ ಇದೆ ಎಂದು ತೋರಿಸಿಕೊಡುವ ಕೆಲಸವೂ ಆಗಬೇಕು ಎಂದರು.

ತುಳುನಾಡು ಒಕ್ಕೂಟದ ಬೆಳ್ತಂಗಡಿ ನಗರಾಧ್ಯಕ್ಷ ರಾಜು ಬಿ.ಎಚ್‌. ಅವರು ಜಾದೂ ಮೂಲಕ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆ, ಸಾಹಿತಿ ಉಗ್ಗಪ್ಪ ಪೂಜಾರಿ ಮೂಡುಬಿದಿರೆ, ಕೊಡಗು ತುಳು ಜಾನಪದ ಕೂಟದ ಅಧ್ಯಕ್ಷ ಹರೀಶ್‌ ಆಳ್ವ, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸೇವಿಯರ್‌ ಪಾಲೇಲಿ, ಕಾರ್ಯದರ್ಶಿ ಮನೋಹರ್‌ಕುಮಾರ್‌, ತುಳುನಾಡು ಒಕ್ಕೂಟದ ಪುತ್ತೂರು ಜಿಲ್ಲಾಧ್ಯಕ್ಷ ನವೀನ್‌ ಬಿ.ಕೆ., ಕಾನೂನು ಸಲಹೆಗಾರ ಪ್ರಶಾಂತ್‌ ಬಿ., ತಾಲೂಕು ಅಧ್ಯಕ್ಷ ವಿನ್ಸೆಂಟ್‌ ಲೋಬೊ, ಪುತ್ತೂರು ತಾಲೂಕು ಅಧ್ಯಕ್ಷ ಶೇಖರ್‌ ಗೌಡತ್ತಿಗೆ, ಜನಾರ್ದನ ಬಂಗೇರ ಮೊದಲಾದವರಿದ್ದರು.

ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಬೆಳ್ತಂಗಡಿ ತಹಶೀಲ್ದಾರ್‌ ಮೂಲಕ ಪ್ರಧಾನಿ, ಕರ್ನಾಟಕ, ಕೇರಳ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್‌ ಆರ್‌.ಜೆ. ಸ್ವಾಗತಿಸಿದರು.

Advertisement

ಮಾಜಿ ಶಾಸಕರು ಭೇಟಿ
ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ತುಳು ಭಾಷೆಗೆ ಸಂವಿಧಾನದ ಮಾನ್ಯತೆಗಾಗಿ ನಿರಂತರ ಹೋರಾಟ ಮಾಡಿದ್ದೇನೆ. ವಿಧಾನಸೌಧದಲ್ಲಿ ತುಳುವಿನಲ್ಲಿ ನಾನು ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದು, ಆಗ ಸ್ಪೀಕರ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ನಾನು ತುಳುವಿನಲ್ಲೇ ಪ್ರಮಾಣವಚನ ಮಾಡಿ, ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಿ ಎಂದಿದ್ದೆ ಎಂದರು.

ಹೋರಾಟಗಳು ಅಗತ್ಯ
ಈ ಹಿಂದೆ ತುಳುವನ್ನು ಕಲಿಕಾ ಭಾಷೆಯನ್ನಾಗಿಸುವ ಸಂದರ್ಭದಲ್ಲೂ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿತ್ತು. ಅದೇ ರೀತಿ ಸಂವಿಧಾನದ ಮಾನ್ಯತೆಗೂ ಹೋರಾಟಗಳು ಅಗತ್ಯ. ಪ್ರಸ್ತುತ ತುಳುನಾಡಿನ ಸರಕಾರಿ ಇಲಾಖೆಗಳಲ್ಲೂ ಇತರ ಭಾಗದವರಿಗೂ ಅವಕಾಶ ನೀಡುವ ಪದ್ಧತಿ ಹೆಚ್ಚುತ್ತಿದ್ದು, ತುಳುವರಿಗೂ ಆದ್ಯತೆ ನೀಡಬೇಕು.
 – ಉದಯ ಧರ್ಮಸ್ಥಳ ತುಳು ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next