Advertisement

ಕರ್ನಾಟಕ ಪ್ರಾಂತ ರೈತ ಸಂಘದಿಂದ ಧರಣಿ

12:30 PM Apr 26, 2022 | Team Udayavani |

ಜೇವರ್ಗಿ: ರೈತರು ಬೆಳೆಯುವ ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ಘೋಷಣೆ ಮಾಡಬೇಕು, ತಕ್ಷಣ ಸ್ವಾಮಿನಾಥನ್‌ ವರದಿ ಜಾರಿ ಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಸೋಮವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.

Advertisement

60 ವರ್ಷ ದಾಟಿದ ರೈತರಿಗೆ ಹಾಗೂ ಕೂಲಿಕಾರ್ಮಿಕರಿಗೆ ಮಾಸಿಕ 7500ರೂ. ಮಾಸಾಶನ ಮಂಜೂರಿ ಮಾಡಬೇಕು. ಉದ್ಯೋಗ ಖಾತ್ರಿಯಲ್ಲಿ ಕೆಲಸದ ಸಮಯವನ್ನು ಬೆಳಗ್ಗೆ 7ರಿಂದ 11 ಗಂಟೆ ವರೆಗೆ ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ನರೇಗಾ ಕೂಲಿಯನ್ನು ಇತ್ತೀಚೆಗೆ ಪರಿಷ್ಕೃರಿಸಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪ್ರಸ್ತುತ ನೀಡುತ್ತಿರುವ ಕೂಲಿ ಯಾವುದಕ್ಕೂ ಸಾಲುತ್ತಿಲ್ಲ. ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನರೇಗಾ ಕೂಲಿಯನ್ನು 600ರೂ.ಗೆ ಹೆಚ್ಚಳ ಮಾಡಬೇಕು. ಪ್ರತಿಯೊಂದು ಕುಟುಂಬಕ್ಕೆ ಕನಿಷ್ಟ 200 ದಿನ ಕೆಲಸ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೆಲಸಗಾರರಿಗೆ ಅನೇಕ ಕಡೆ ಕೂಲಿ ಹಣ ಪಾವತಿ ಮಾಡಿಲ್ಲ. ಕೊರೊನಾದಂತ ಸಂಕಷ್ಟ ಸಮಯದಲ್ಲಿ ಯಾವುದೇ ಪರಿಹಾರ ನೀಡಿಲ್ಲ. ಕೂಲಿಕಾರ್ಮಿಕರಿಗೆ ಬಾಕಿ ಇರುವ ವೇತನ ಹಾಗೂ ಕೊರೊನಾ ಪರಿಹಾರ ತಕ್ಷಣ ನೀಡಬೇಕು. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಕೆಲಸದ ಪ್ರಮಾಣ ಕಡಿಮೆ ಮಾಡಬೇಕು. ಈ ವರ್ಷ ಹಾಳಾಗಿರುವ ತೊಗರಿ, ಹತ್ತಿ ಬೆಳೆಗಳಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು, ಜೇವರ್ಗಿಯಿಂದ ಗೌನಳ್ಳಿ ವರೆಗಿನ ರಸ್ತೆ ಡಾಂಬರೀಕರಣ ಮಾಡಬೇಕು. ಜೇವರ್ಗಿಯಿಂದ ಶಹಾಪುರಕ್ಕೆ ತೆರಳುವ ರಾಜ್ಯ ಹೆದ್ದಾರಿ ದುರಸ್ತಿ ಮಾಡಬೇಕು. ಕೋಳಕೂರ ಗ್ರಾಮದಲ್ಲಿರುವ ಜೋಗಿಕೊಳ್ಳದ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ, ಕಾರ್ಯದರ್ಶಿ ಪರಶುರಾಮ ಬಡಿಗೇರ, ಹಿರಿಯ ರೈತ ಮುಖಂಡ ವೆಂಕೋಬರಾವ್‌ ವಾಗಣಗೇರಾ, ಮಲಕಪ್ಪ ಮ್ಯಾಗೇರಿ ಹರನೂರ, ಶಂಕರಲಿಂಗ ರೇವನೂರ, ಶ್ರೀನಾಥ ಕೋಳಕೂರ, ಜೈಭೀಮ ಮುದಬಾಳ, ಮಲ್ಲಿಕಾರ್ಜುನ ವರ್ಚನಳ್ಳಿ, ಬಸವರಾಜ ಶಖಾಪುರ, ನಿಂಗಣ್ಣ ಯಾತನೂರ, ಮಹೇಶ ಬಳಬಟ್ಟಿ, ರಾಜು ಸಾಥಖೇಡ ರೇವನೂರ ಹಾಗೂ ರೈತ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next