Advertisement

ಮರಿಯಮ್ಮನಹಳ್ಳಿಗೆ ನೀರು ಬಿಡದಿದ್ದರೆ ಹೋರಾಟ

12:47 PM May 12, 2022 | Team Udayavani |

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಪಾವಗಡಕ್ಕೆ ಕುಡಿಯುವ ನೀರು ಹರಿಸುವ ಯೋಜನೆಯಲ್ಲಿ ಮರಿಯಮ್ಮನಹಳ್ಳಿ ಪಟ್ಟಣಕ್ಕೂ ನೀರು ಕೊಡಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಅನಿರುದ್ಧ ಪಿ. ಶ್ರವಣ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

Advertisement

ಶಾಸಕ ಭೀಮಾನಾಯ್ಕ ಮಾತನಾಡಿ, ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಪಾವಗಡ ಕುಡಿವ ನೀರಿನ ಯೋಜನೆಯಡಿ ನೀರು ಒದಗಿಸದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ. ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿರುವ ಹಂಪಿನಕಟ್ಟಿ ಕೆರೆಯ ಅಂಗಳದಿಂದ ಪಾವಗಡಕ್ಕೆ ನೀರು ಹರಿಸುವ ಸಂಬಂಧ ಅಂದಾಜು ಎರಡು ಸಾವಿರ ಕೋಟಿಗೂ ಅಧಿಕ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳು ಕಳೆದಿವೆ. ಶೇ. 50ರಷ್ಟು ಕಾಮಗಾರಿ ಮುಗಿದಿದೆ. ಪ್ರಾರಂಭವಾಗಿರುವ ಈ ಯೋಜನೆಯ ಪೈಪ್‌ ಲೈನ್‌ ಕಾಮಗಾರಿ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಹಾದು ಹೋಗಲಿದ್ದು, ಪಾವಗಡ ಕುಡಿಯುವ ನೀರಿನ ಯೋಜನೆಯಲ್ಲಿ ಮರಿಯಮ್ಮಹಳ್ಳಿಗೂ ನೀರು ಕೊಡಬೇಕು ಎಂದು ಆಗ್ರಹಿಸಿದರು.

ತುಂಗಭದ್ರಾ ಜಲಾಶಯ ಪಕ್ಕದಲ್ಲೇ ಮರಿಯಮ್ಮನಹಳ್ಳಿ ಪಟ್ಟಣವಿದ್ದು, ಜಲಾಶಯ ನಿರ್ಮಾಣಕ್ಕೆ ಮರಿಯಮ್ಮನಹಳ್ಳಿಯ ಜನಗಳು ಮನೆ, ಮಠ, ಕಳೆದುಕೊಂಡಿದ್ದಾರೆ. ಆದರೂ ಮರಿಯಮ್ಮನಹಳ್ಳಿ ಪಟ್ಟಣದ ಜನರಿಗೆ ಇದುವರೆಗೆ ಕುಡಿಯುವ ನೀರು ದೊರೆತಿಲ್ಲ. ಮರಿಯಮ್ಮನಹಳ್ಳಿ ಮಾರ್ಗವಾಗಿ ಹಾದುಹೋಗುವ ಪಾವಗಡ ಕುಡಿಯುವ ನೀರಿನ ಯೋಜನೆಯಲ್ಲಿ ಮರಿಯಮ್ಮನಹಳ್ಳಿಗೂ ನೀರು ಕೊಡಲಿ ಎಂದು ಶಾಸಕ ಭೀಮಾನಾಯ್ಕ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ಮಾತನಾಡಿ, ಪಾವಗಡ ಕುಡಿಯುವ ನೀರಿನ ಯೋಜನೆಯಲ್ಲಿ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ನೀರು ಕೊಡುವುದಕ್ಕೆ ಎಷ್ಟು ಸಾಧ್ಯತೆಗಳಿವೆ ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಯೋಜನೆಯ ರೂಪುರೇಷೆಗಳನ್ನು ಪರಿಶೀಲಿಸಲಾಗುವುದು ಎಂದರು. ಸಂಸದ ವೈ.ದೇವೇಂದ್ರಪ್ಪ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿ ಸದಸ್ಯರು ಇದ್ದರು.

ಜಿಲ್ಲಾಧಿಕಾರಿಗಳು ನೀಡಿದ ಗಡುವು ಮುಕ್ತಾಯವಾಗುವುದರೊಳಗೆ ನಮ್ಮ ಬೇಡಿಕೆ ಈಡೇರಬೇಕು. ಇಲ್ಲವಾದರೆ ಮಾರನೆ ದಿನವೇ ಮರಿಯಮ್ಮನಹಳ್ಳಿ ಪಟ್ಟಣದ 25 ಸಾವಿರ ಜನರು ನೀರಿಗಾಗಿ ಪ್ರತಿಭಟನೆಗೆ ಇಳಿಯುವುದು ಪಕ್ಕಾ ಎಂದು ಶಾಸಕ ಭೀಮಾನಾಯ್ಕ ಸುದ್ದಿಗಾರರಿಗೆ ತಿಳಿಸಿದರು.

Advertisement

ಪಾವಗಡ ಕುಡಿಯುವ ನೀರಿನ ಯೋಜನೆ ಪ್ರಾರಂಭವಾದಾಗ ಮೊಳಕಾಲ್ಮೂರು ಪಟ್ಟಣಕ್ಕೆ ನೀರು ಕೊಡುವ ಆಲೋಚನೆ ಸರ್ಕಾರಕ್ಕೆ ಇರಲಿಲ್ಲ. ಆದರೆ ಇತ್ತೀಚೆಗೆ ಏಕಾಏಕಿಯಾಗಿ ಈ ಯೋಜನೆಯಲ್ಲಿ ಮೊಳಕಾಲ್ಮೂರು ಪಟ್ಟಣಕ್ಕೆ ನೀರು ಕೊಡುವ ತೀರ್ಮಾನವನ್ನು ಸರ್ಕಾರ ಮಾಡಿತ್ತು. ಅದೇ ಯೋಜನೆಯಲ್ಲಿ ಮರಿಯಮ್ಮನಹಳ್ಳಿ ಪಟ್ಟಣಕ್ಕೂ ನೀರು ಕೊಡಲು ಒತ್ತಾಯಿಸಿದ್ದೇವೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next