Advertisement

ಶಿರಸಿ ಜಿಲ್ಲೆಗೆ ಆಗ್ರಹಿಸಿ ಸ್ವಯಂ ಪ್ರೇರಿತ ಬಂದ್‌

05:30 PM Feb 25, 2021 | Team Udayavani |

ಶಿರಸಿ: ಘಟ್ಟದ ಮೇಲಿನ ಏಳು ತಾಲೂಕುಗಳನ್ನು ಸೇರಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ಶಿರಸಿ ಬಂದ್‌ಗೆ ಪೂರ್ಣ ಬೆಂಬಲ ವ್ಯಕ್ತವಾಗಿದೆ.

Advertisement

ತುರ್ತು ಸೇವೆಗಳು ಹೊರತುಪಡಿಸಿ ಅಂಗಡಿ ಮುಂಗಟ್ಟುಗಳು, ಅಟೋ ಸಂಚಾರ, ಟೆಂಪೋ ಸಂಚಾರ ಸೇರಿದಂತೆ ಎಲ್ಲವೂ ಸ್ಥಬ್ಧವಾಗಿದ್ದವು. ಬುಧವಾರ ಮುಂಜಾನೆಯಿಂದಲೇ ಯಾವುದೇ ಅಂಗಡಿ, ಹೋಟೆಲ್‌ ಕೂಡ ತೆರೆಯದೇ ಶಿರಸಿ ಪ್ರತ್ಯೇಕ ಜಿಲ್ಲೆಗೆ ಬೆಂಬಲ ಸೂಚಿಸಿದ್ದವು. ಟಿಎಂಎಸ್‌ ಸಹಕಾರಿ ಸಂಸ್ಥೆ, ಸರ್ಕಾರಿ ಪದವಿ ಕಾಲೇಜಿಗೆ. ಲಯನ್ಸ್‌ ಶಾಲೆಗೆ ರಜೆ ಘೋಷಿಸಲಾಗಿತ್ತು. ಬಸ್‌ ಗಳ ಓಡಾಟ ಇತ್ತಾದರೂ ಜನರಾರು ಏರದೇ ಖಾಲಿಯಾಗಿ ಓಡಾಟ ಮಾಡಿದವು. ಸರಕಾರಿ ಕಚೇರಿಗಳು ತೆರೆದಿದ್ದರೂ ಜನರೇ ಬಾರದೇ ಬಿಕೋ ಎಂದವು.

ಗೂಡಂಗಡಿಗಳಿಂದ ಹಿಡಿದು ಮಾಲ್‌ ತನಕ ಮಧ್ಯಾಹ್ನ 2 ಗಂಟೆತನಕ ಕರೆ ನೀಡಲಾಗಿದ್ದ ಬಂದ್‌ಗೆ ಸಹಕಾರ ನೀಡಿದವು. ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ರಚಿಸುವಂತೆ ಹಕ್ಕೊತ್ತಾಯಗಳೂ ಕೇಳಿ ಬಂದವು.

ಜಿಲ್ಲೆಯಾಗುವ ತನಕ ಹೋರಾಟ: ಬೆಳಗ್ಗೆ 10ಕ್ಕೆ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಸಂಚಾಲಕ ಎಂ.ಎಂ. ಭಟ್ಟ ಕಾರೆಕೊಪ್ಪ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಭಾಗದ ಹೋರಾಟಗಾರರ, ಸ್ಥಳೀಯ ಜನರ, ಜನಪ್ರತಿನಿಧಿಗಳ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಜನರು ಬƒಹತ್‌ ಮೆರವಣಿಗೆ ನಡೆಸಿದರು. ಹಳೆ ಬಸ್‌ ನಿಲ್ದಾಣದ ವೃತ್ತದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ ಪ್ರತಿಭಟನಾಕಾರರು ಪ್ರತಿಭಟನೆ ಆರಂಭಿಸಿದರು.

ಮೆರವಣಿಗೆಯಲ್ಲಿ ತಮಟೆ ಬಾರಿಸುತ್ತ, ಜಿಲ್ಲಾ ಹೋರಾಟ ಘೋಷಣೆಗಳನ್ನು ಹೇಳುತ್ತ ಹುಬ್ಬಳ್ಳಿ ರಸ್ತೆ ಮೂಲಕ ಮಾರಿಗುಡಿಗೆ ತೆರಳಿ ಅಲ್ಲಿಂದ ಶಿವಾಜಿ ಚೌಕ, ಚನ್ನಪಟ್ಟಣ ಭಜಾರ್‌, ಝೂ ವೃತ್ತದ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ವಿವೇಕಾನಂದ ವೈದ್ಯ, ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆ ರಚನೆ ಅನಿವಾರ್ಯ. ಆದರೆ, ಈ ಬಗ್ಗೆ ಯಾವ ಜನಪ್ರತಿನಿಧಿಗಳೂ ಮಾತನಾಡದೆ ಇರುವುದು ಬೇಸರ ತಂದಿದೆ ಎಂದರು. ಜಿಪಂ ಸದಸ್ಯ ಜಿ.ಎನ್‌. ಹೆಗಡೆ ಮುರೇಗಾರ, ಮೊದಲು ಪ್ರತ್ಯೇಕ ಜಿಲ್ಲೆ ರಚನೆಯಾಗಲಿ. ಜಿಲ್ಲಾ ಕೇಂದ್ರದ ಬಗ್ಗೆ ನಂತರ ತೀರ್ಮಾನಿಸೋಣ ಎಂದರು.

Advertisement

ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ರಾಜಕೀಯ ಇಚ್ಛಾಶಕ್ತಿ ಕೊರತೆ ಎದುರಾಗಿದೆ. ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಪ್ರತ್ಯೇಕ ಜಿಲ್ಲೆ ಆಗುವ ತನಕ ಹೋರಾಟ ಮಾಡುತ್ತೇವೆ. ಸರಕಾರಕ್ಕೆ ನಮ್ಮ ಬೇಡಿಕೆಯ ಅರಿವಿದೆ. ಕಳೆದ 37 ವರ್ಷಗಳಿಂದ ನಡೆದಿದೆ. ಸರಕಾರ ಬನವಾಸಿಯನ್ನು ತಾಲೂಕೆಂದು ಘೋಷಿಸಿ, ಶಿರಸಿಗೆ ಪ್ರತ್ಯೇಕ ಜಿಲ್ಲಾ ಸ್ಥಾನಮಾನ ಕೊಡಬೇಕು ಎಂದೂ ಹೇಳಿದರು.

ಪ್ರಮುಖರಾದ ಎಂ.ಎಂ.ಭಟ್ಟ, ಪರಮಾನಂದ ಹೆಗಡೆ, ಮಂಜು ಮೊಗೇರ, ಶ್ರೀಧರ ಮೊಗೇರ, ಸಿದ್ದಾಪುರದ ಸಿ.ಎಸ್‌. ಗೌಡರ್‌, ಶಿವಾನಂದ ಕಳವೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಶ ಶೆಟ್ಟಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ್‌ ದೊಡ್ಮನಿ, ಬಿ.ಶಿವಾಜಿ, ಮಹಾದೇವ ಚೆಲುವಾದಿ ಸೇರಿದಂತೆ ಅನೇಕ ಸಂಘಟನೆಗಳ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next