ದಾವಣಗೆರೆ: ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೊಡಬೇಕಾಗಿರುವ 2016-17ನೇ ಸಾಲಿನ ವಿದ್ಯಾರ್ಥಿ ವೇತನ ಬಿಡುಗಡೆಗೆ ಒತ್ತಾಯಿಸಿ ಅಖೀಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್‌ಎಫ್) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈವರೆಗೆ ಪ್ರಸಕ್ತ ಸಾಲಿನ ವಿದ್ಯಾರ್ಥಿ ವೇತನ ಸಿಕ್ಕಿಲ್ಲ. ಕೆಲವು ವಿದ್ಯಾರ್ಥಿಗಳಿಗೆ 3 ವರ್ಷದಿಂದ ವಿದ್ಯಾರ್ಥಿ ವೇತನ ನೀಡಿಲ್ಲ. ಪರಿಶಿಷ್ಟ ಜಾತಿಯ ಕೆಲವರಿಗೆ ವಿದ್ಯಾರ್ಥಿ ವೇತನ ನೀಡಿ, ಇನ್ನು ಕೆಲವರಿಗೆ ತಡೆಹಿಡಿಯಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಏರ್ಪಟ್ಟಿದೆ.
ವಿದ್ಯಾರ್ಥಿ ವೇತನ ನೀಡುವಲ್ಲಿ ಸಮಾಜ ಕಲ್ಯಾಣ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗುವ ವಿದ್ಯಾರ್ಥಿ ವೇತನ ನೀಡುವುದಕ್ಕೆ ವಿಳಂಬ ಮಾಡುವುದು, ವಿನಾ ಕಾರಣ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಇಲಾಖೆಗೆ, ಬ್ಯಾಂಕಿನಿಂದ ಬ್ಯಾಂಕಿಗೆ ಅಲೆದಾಡಿಸುವುದು,
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳವರು ವಿದ್ಯಾರ್ಥಿಗಳ ದಾಖಲಾತಿ ಶುಲ್ಕದಲ್ಲಿ ವಿನಾಯತಿ ಅರ್ಜಿ ಹಾಕಿಲ್ಲ ಎಂಬ ಕಾರಣಕ್ಕೆ ಏಕಾಏಕಿ ಶುಲ್ಕ ಪಾವತಿಸುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ತಿಳಿಸಿದರು. ತೀವ್ರ ಬರದ ಹಿನ್ನೆಲೆಯಲ್ಲಿ ಅನೇಕ ಪೋಷಕರ ಆರ್ಥಿಕ ಸ್ಥಿತಿ ಸರಿ ಇಲ್ಲ. ಅಂತಹದ್ದರ ನಡುವೆಯೂ ಕೆಲವಾರು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವಂತೆ ಇನ್ನಿಲ್ಲದಕಿರುಕುಳ ನೀಡುತ್ತಿರುವು ನಿಲ್ಲಿಸಬೇಕು.
ರಾಜ್ಯ ಸರ್ಕಾರ ಕೂಡಲೇ ಕಿರುಕುಳಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ, ಸಂಘಟನೆ ನೇತೃತ್ವದಲ್ಲಿ ರಾಜ್ಯದ್ಯಾಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಉಪಾಧ್ಯಕ್ಷ ಚಂದ್ರನಾಯ್ಕ, ರಾಜ್ಯ ಕಾರ್ಯದರ್ಶಿ ಶಾಂತರಾಜ್ ಜೈನ್, ಸಹ ಕಾರ್ಯದರ್ಶಿ ಎಚ್. ರಮೇಶ್‌ನಾಯ್ಕ, ಪ್ರಕಾಶ್ ಮತ್ತಿ, ಶಾಂತಲಾ, ಎಂ. ಮೇಘಾ, ಟಿ.ವಿ. ಜ್ಯೋತಿ, ಎಂ. ಗೌತಮಿ, ದಿವ್ಯಾ ಬಿ. ರಾಜ್, ಆರ್. ರೂಪಾ ಇತರರು ಇದ್ದರು.