Advertisement

ಗಣಿಗಾರಿಕೆ ಸ್ಥಗಿತಕ್ಕಾಗಿ ಪ್ರತಿಭಟನೆ

03:37 PM Oct 21, 2020 | Suhan S |

ಮದ್ದೂರು: ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಸೋಮನಹಳ್ಳಿ ಜಿಪಂ ವ್ಯಾಪ್ತಿಯ ಚಂದಹಳ್ಳಿದೊಡ್ಡಿ ಗ್ರಾಮದಲ್ಲಿ ಹಾನಿಗೊಳಗಾಗಿರುವ ಮನೆ ಮುಂದೆಜಮಾಯಿಸಿದ ಸಂಘಟನೆ ಕಾರ್ಯಕರ್ತರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕ್ರಮಕ್ಕೆ ಮುಂದಾಗಿಲ್ಲ: ಬೆಂಗಳೂರು- ಮೈಸೂರುರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಗಾಗಿ ಕಂಪನಿಯೊಂದು ಅಕ್ರಮವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದೆ. ಇದರಿಂದ ನೂರಾರು ಮನೆಗಳು ಬಿರುಕುಬಿಟ್ಟು ಹತ್ತಕ್ಕೂಹೆಚ್ಚು ಮನೆಗಳು ನೆಲಕ್ಕುರುಳಿದ್ದರೂ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ಕಲ್ಲುಗಣಿಗಾರಿಕೆ ನಡೆಯುವ ವೇಳೆ ಭಾರಿ ಸ್ಫೋಟದ ಸಿಡಿ ಮದ್ದುಗಳನ್ನು ಬಳಸುವುದರಿಂದ ಬಂಡೆಯ ಚೂರುಗಳು ಕೃಷಿಜಮೀನುಗಳಿಗೆ ಸಿಡಿಯುವುದರಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೆ ನಷ್ಟ ಉಂಟಾಗುತ್ತಿರುವ ಘಟನೆಗಳು ನಡೆದಿವೆ. ಸಂಜೆ 6ರಿಂದ ರಾತ್ರಿ 10 ಗಂಟೆಯ ವರೆವಿಗೆ ಸ್ಫೋಟಕ ವಸ್ತುಗಳನ್ನು ಬಳಸುವುದರಿಂದ ಮಹಿಳೆಯರು, ವೃದ್ಧರು, ಮಕ್ಕಳು ಮನೆಯ ಹೊರಗಡೆ ಇರಬೇಕಾದ ಅನಿವಾರ್ಯವಿದೆ. ಪ್ರತಿನಿತ್ಯ ಭಯದ ವಾತಾವರಣದಲ್ಲೇ ಬದುಕಬೇಕಾದ ಪರಿಸ್ಥಿತಿ ಬಂದಿದ್ದು, ಸಾರ್ವಜನಿಕರು ಬೀದಿಯಲ್ಲಿಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಳಿರಾಯನ ಗುಡ್ಡ ರಕ್ಷಿಸಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತ ಪರವಾನಗಿ ನೀಡದಿದ್ದರೂ, ಕಳೆದ ಹಲವು ತಿಂಗಳಿಂದ ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ತೊಡಗಿದ್ದು, ಹಾನಿಗೊಳಗಾದ ಮನೆಗಳಿಗೆ ಜಿಲ್ಲಾಡಳಿತ ಪರಿಹಾರ ವಿತರಿಸಬೇಕು. ಕೂಡಲೇ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ, ಇತಿಹಾಸಪ್ರಸಿದ್ಧ ಕೋಳಿರಾಯನ ಗುಡ್ಡವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

Advertisement

ಜಿಲ್ಲಾಡಳಿತ ಒಂದು ವಾರದೊಳಗಾಗಿ ಅಗತ್ಯ ಕ್ರಮವಹಿಸಿ, ಅಕ್ರಮ ಕಲ್ಲು ಗಣಿಗಾರಿಕೆಯ ನಿಯಂತ್ರಣ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸ್ಥಳೀಯ ಗ್ರಾಮಸ್ಥರೊಂದಿಗೆ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ಸಂಘಟನೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಜಿಲ್ಲಾಧ್ಯಕ್ಷ ವಿ.ಸಿ. ಉಮಾ ಶಂಕರ್‌, ಪದಾಧಿಕಾರಿಗಳಾದ ರಂಜೀತ್‌ಗೌಡ, ಉಮೇಶ್‌, ಸಾಗರ್‌, ಶ್ರೀಧರ್‌, ಸೋಮು, ಸಿದ್ದರಾಜು, ಚನ್ನಪ್ಪ ರಾಮಯ್ಯ, ಚಿಕ್ಕಮರಿ, ಸುರೇಶ್‌, ಕೃಷ್ಣಪ್ಪ, ಅಂಕಪ್ಪ, ಸಿದ್ದಪ್ಪ ‌ ಪುಟ್ಟಸ್ವಾಮಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

 

ಕೋವಿಡ್ ತಡೆಗೆ ಸರ್ಕಾರಿ ಮಾರ್ಗಸೂಚಿ ಅನುಸರಿಸಿ :

ಮದ್ದೂರು: ಸಾರ್ವಜನಿಕರು, ಗ್ರಾಹಕರು ಕೇಂದ್ರ ಮತ್ತು ರಾಜ್ಯಸರ್ಕಾರದ ಮಾರ್ಗಸೂಚಿಗಳನ್ನುಅನುಸರಿಸುವ ಮೂಲಕ ಕೋವಿಡ್‌-19 ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಮದ್ದೂರು ಠಾಣೆ ಪಿಎಸ್‌ಐ ರವಿಕುಮಾರ್‌ ತಿಳಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ದಸರಾ ಹಾಗೂ ಆಯುಧ ಪೂಜಾ ಹಬ್ಬದ ಸಂದರ್ಭಗಳಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆಕ್ರಮಗಳ ಜಾಗೃತಿಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲೆಡೆ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದರೂ, ಸಾರ್ವಜನಿಕರು ಬೇಕಾಬಿಟ್ಟಿ ಅಲೆದಾಡುವ ಮೂಲಕ ರೋಗ ಹೆಚ್ಚಳಕ್ಕೆ ಕಾರಣವಾಗುತ್ತಿದ್ದಾರೆ. ಇದರಿಂದ ಪ್ರತಿಯೊಬ್ಬರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್‌-19ನಿಯಂತ್ರಣಕ್ಕೆ ಆರೋಗ್ಯಇಲಾಖೆಅಧಿಕಾರಿಗಳೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಪರಿಸರ ಸ್ವಚ್ಛಗೊಳಿಸಿ: ಜಾಗೃತಿ ಜಾಥಾವು ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರಗಳ ಗ್ರಾಮಗಳಿಗೆ ತೆರಳಿ, ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಂಡು ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಉಜ್ಜೀವನ್‌ ಸ್ಮಾಲ್‌ ಫೈನನ್ಸ್‌ ಸಂಸ್ಥೆ ಸಮಾಜ ಮುಖೀಕಾರ್ಯದಲ್ಲಿತೊಡಗಿರುವುದು ಶ್ಲಾಘನೀಯ. ಜಾಥಾ ವಾಹನದಲ್ಲಿ ದಸರಾ ಗೊಂಬೆಗಳನ್ನು ಪ್ರದರ್ಶಿಸುವ ಜತೆಗೆ ಸರ್ಕಾರದ ಸುರಕ್ಷತಾ ಮಾರ್ಗ ಸೂಚಿಗಳ ಬಗ್ಗೆ ಅರಿವು ಮೂಡಿಸುವಜಾಗೃತಿ ಕಾರ್ಯವಾಗಿದೆ. ಗ್ರಾಮೀಣಭಾಗದಜನರು ಇಂತಹಕಾರ್ಯಕ್ರಮಗಳ ಸದುಪಯೋಗಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಪುರಸಭೆ ವ್ಯವಸ್ಥಾಪಕ ಚಂದ್ರಶೇಖರ್‌, ಉಜ್ಜೀವನ್‌ ಬ್ಯಾಂಕ್‌ನವಿಜಯಭಾಸ್ಕರ್‌, ಮುಖಂಡರಾದ ಎಚ್‌.ಸಿ.ಜಗದೀಶ್‌, ರವಿ ಕುಮಾರ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next