ಬೆಳಗಾವಿ: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯು ತೆರಿಗೆ ರೂಪದಲ್ಲಿ ಕಾರ್ಮಿಕರಿಂದ ಸುಮಾರು 8000 ಕೋಟಿ ಹಣ ಸಂಗ್ರಹ ಮಾಡಿದೆ. ಇದಕ್ಕೆ ಪ್ರತಿ ವರ್ಷ 500 ಕೋಟಿ ರೂ. ಬಡ್ಡಿ ಬರುತ್ತಿದೆ. ಆದರೆ ಈ ಹಣ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಕೆ ಮಾಡುತ್ತಿಲ್ಲ. ಈ ಹಣದ ಬಗ್ಗೆ ವಿಚಾರಿಸಲು ಹೋದ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಆರ್.ಲಾತೂರ, ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಬೆಳಗಾವಿಯ ಉದ್ಯಮಬಾಗದಲ್ಲಿರುವ ಕಾರ್ಮಿಕರ ಕಚೇರಿಯನ್ನು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸ್ಥಳಾಂತರಿಸಿ ಹೆಚ್ಚಿನ ಸಿಬ್ಬಂದಿ, ವಾಹನ ಸೌಲಭ್ಯ, ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಈಗಾಗಲೇ ನೋಂದಾಯಿಸಿದ ಕಾರ್ಮಿಕರ ವಿವರಗಳನ್ನು ಮತ್ತು ಫಲಾನುಭವಿಗಳಿಗೆ ಧನ ಸಹಾಯ ಮಂಜೂರು ಮಾಡಿರುವ ಮಾಹಿತಿಯನ್ನು ಗಣಕೀಕೃತಗೊಳಿಸಿ ಮುಕ್ತವಾಗಿ ಎಲ್ಲರಿಗೂ ಮಾಹಿತಿ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ 15 ಲಕ್ಷಕ್ಕೂ ಅಧಿಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿದ್ದಾರೆ. ಬಹುತೇಕ ಕುಟುಂಬಗಳು ಇದೇ ಉದ್ಯೋಗವನ್ನು ಅವಲಂಬಿಸಿವೆ. ಆದರೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಈ ಜನರಿಗೆ ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಕಾರ್ಮಿಕರು ಆಗ್ರಹಪಡಿಸಿದರು.
ನರೇಗಾ ಕಾರ್ಮಿಕರ ನೋಂದಣಿಗಾಗಿ ವಿಶೇಷ ಅಭಿಯಾನ ಹಮ್ಮಿಕೊಂಡು ಒಂದು ವರ್ಷದಲ್ಲಿ ಜಿಲ್ಲೆಯ ಎಲ್ಲ ನರೇಗಾ ಕಾರ್ಮಿಕರ ನೋಂದಣಿಯನ್ನು ಪೂರ್ಣಗೊಳಿಸಬೇಕು. ಕಾರ್ಮಿಕ ಸಚಿವರು ಪ್ರತಿ ಮೂರು ತಿಂಗಳಿಗೊಮ್ಮೆ ಬೆಳಗಾವಿ ಕಾರ್ಮಿಕ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೊಂದಾಯಿಸಿಕೊಂಡಿರುವ ಕಾರ್ಮಿಕರಿಗೆ ಎಲ್ಲ ರೀತಿಯ ಕೃಷಿ ಕೆಲಸಗಳನ್ನು ನೀಡಬೇಕು ಮತ್ತು ಪಂಚಾಯತ್ ವತಿಯಿಂದ ವೇತನ ಬಿಡುಗಡೆ ಮಾಡಬೇಕು. ಈ ಯೋಜನೆಯಡಿ ದೊರಕುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಟ್ಟಡ ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ನರೆಗಾ ಕಾರ್ಮಿಕರ ಬಾಕಿ ವೇತನವನ್ನು ತಕ್ಷಣವೇ ಪಾವತಿಸಬೇಕು. ಪ್ರತಿ ವರ್ಷ 200 ದಿನಗಳವರೆಗೆ ಉದ್ಯೋಗನೀಡಬೇಕು. ಕಾರ್ಮಿಕರ ಬಿಪಿಎಲ್ ಪಡಿತರ ಚೀಟಿಯಾಗಿರುವ ಷರತ್ತುಗಳಿಂದ ವಿನಾಯತಿ ನೀಡಿ ಎಲ್ಲ ಸೌಲಭ್ಯಗಳನ್ನು ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರಿಗೆ ದೊರೆಯುವ ಪಿಂಚಣಿಯನ್ನು ಐದು ಸಾವಿರಕ್ಕೆ ಹೆಚ್ಚಿಸಬೇಕು. ಈ ವೇತನವನ್ನು ಕಾರ್ಮಿಕರ ಕಲ್ಯಾಣ ಮಂಡಳಿಯಿಂದಲೇ ನೀಡಲು ಕ್ರಮ ಕೈಗೊಳ್ಳಬೇಕು. ನೋಂದಾಯಿತ ಫಲಾನುಭವಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಎಲ್ಲ ರೀತಿಯ ಕಾಯಿಲೆಗಳಿಗೆ ಪೂರ್ಣ ವೈದ್ಯಕೀಯ ಸಹಾಯ ಧನ ನೀಡಬೇಕು ಎಂದು ಒತ್ತಾಯಿಸಿದರು.