Advertisement

ಪ್ರವಾಹ: ಸಂಕಷ್ಟಕ್ಕೊಳಗಾದವರಿಗೆ ಸ್ಪಂದಿಸಿ

04:50 PM Nov 04, 2020 | Suhan S |

ಕಲಬುರಗಿ: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ ಐದು ಸರಣಿ ಪ್ರತಿಭಟನೆಗಳು ನಡೆದವು. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಇಳಿದಿದ್ದ ವಿವಿಧ ಸಂಘಟನೆಗಳು ಸರ್ಕಾರ ಮತ್ತು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪರಿಹಾರ ನೀಡಿ: ಜಿಲ್ಲೆಯಲ್ಲಿ ಮಳೆ ಮತ್ತು ಭೀಮಾ ನದಿ ಪ್ರವಾಹದಿಂದಾಗಿ ಸಂಕಷ್ಟದಲ್ಲಿರುವ ಕೃಷಿಕರು, ಗ್ರಾಮಸ್ಥರಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆರೆಯಿಂದ ಬೆಳೆದ ಬೆಳೆ, ಮನೆ ಕಳೆದುಕೊಂಡು ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂತ್ರಸ್ತರ ನೆರವಿಗೆ ಮುಂದಾಗದೇ ಪ್ರಾದೇಶಿಕ ಅಸಮಾನತೆ, ತಾರತಮ್ಯ ಧೋರಣೆ ಅನುಸರಿಸುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ಬೆಳೆ ಪರಿಹಾರ, ಮನೆಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ ಐದು ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸೈಯದ್‌ ಅಬ್ದುಲ್‌ ಬ್ಯಾರಿ, ಸಲಿಂ ಅಹ್ಮದ ಚಿತ್ತಾಪೂರ, ಮೋಬಿನ್‌ ಅಹ್ಮದ, ಸಲೀಂ ಸಗರಿ ಮುಂತಾದವರು ಇದ್ದರು.

ಖಾತ್ರಿ ಕೂಲಿ ದಿನ ಹೆಚ್ಚಿಸಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದಿಂದ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

Advertisement

ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ, ಕೋವಿಡ್  ಲಾಕ್‌ಡೌನ್‌, ಅತಿವೃಷ್ಟಿ ಮತ್ತು ಪ್ರವಾಹದಿಂದ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಾಗಿದೆ. ಈಗಾಗಲೇ ಖಾತ್ರಿ ಯೋಜನೆಯ 100 ದಿನಗಳು ಮುಗಿದಿದ್ದು, 200 ದಿನಕ್ಕೆ ಹೆಚ್ಚಿಸಿ ಕೂಲಿ ನೀಡಬೇಕು. ಅಲ್ಲದೇ, ಪಡಿತರ ಮೂಲಕ ಇನ್ನೂ ಆರು ತಿಂಗಳು ತಲಾ ಐದು ಕೆಜಿಯಂತೆ ಆಹಾರ ಧಾನ್ಯ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಸಂಘಟನೆಯ ಪ್ರಕಾಶ ಬೆಳಮಗಿ, ಗುರುರಾಜ ಕೂಡಲ ಹಂಗರಗಿ, ಕಾವೇರಿ ಯಡ್ರಾಮಿ, ಸಪ್ನಾದೀಪಾ ಮೊಳಕೇರಿ, ನಿರ್ಮಲಾ, ಶರಣು ಕುಂಬಾರ, ಬಸವರಾಜ ಮತ್ತಿತರರು ಪಾಲ್ಗೊಂಡಿದ್ದರು.

ಇನ್ನೂ ಸಿಗದ ಪರಿಹಾರ: ಕೋವಿಡ್‌ ಸಂದರ್ಭದಲ್ಲಿ ಅಸಂಘಟಿತ ಕೈಮಗ್ಗ ನೇಕಾರರಿಗೆ ಸಮ್ಮಾನ್‌ ಯೋಜನೆಯಡಿ ನೀಡಬೇಕಾದ 2 ಸಾವಿರ ರೂ. ನೆರವಿನ ಹಣ ಇನ್ನೂ ಸಿಕ್ಕಿಲ್ಲ ಎಂದು ಆರೋಪಿಸಿ ಶೆಪೆರ್ಡ್‌ ಟೈಗರ್‌ ಪೋರ್ಸ್‌ ಇಂಡಿಯಾ ಕರ್ನಾಟಕ ನ್ಯೂ ಜಿಲ್ಲಾ ಘಟಕ ಮತ್ತು ಅಸಂಘಟಿತ ವಲಯ ಕೈಮಗ್ಗ ನೇಕಾರರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ತಕ್ಷಣವೇ ನೆರವಿನ ಹಣ ಇನ್ನೂ ಬಿಡುಗಡೆ ಮಾಡಬೇಕು. ಎಲ್ಲ ನೇಕಾರರಿಗೆ ಗುರುತಿನ ಚೀಟಿ ನೀಡಬೇಕು. 55 ವಯಸ್ಸಿನ ನೇಕಾರರಿಗೆ ಮಾಸಾಶನಜಾರಿ ಮಾಡಬೇಕು. ವೃತ್ತಿಪರ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಸರ್ಕಾರ ಎಲ್ಲ ಸೌಲಭ್ಯ ನೀಡಬೇಕು. ಮೇಲಾಗಿ ನೇಕಾರರ ಸೌಕರ್ಯದ ಬಗ್ಗೆ ಮಾಹಿತಿ ನೀಡದ ಜಿಲ್ಲಾ ಕೈಮಗ್ಗ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿತರರು ಆಗ್ರಹಿಸಿದರು.

ಶಿವರಾಯ ಪೂಜಾರಿ, ಚಂದ್ರಪ್ಪ, ಬಕ್ಕಪ್ಪ ಪೂಜಾರಿ, ನಾಗಪ್ಪ ಪೂಜಾರಿ, ಶಿವಕುಮಾರ ಪೂಜಾರಿ, ಸಿದ್ದು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮನೆ ಹಂಚಿಕೆಯಲ್ಲಿ ಅಕ್ರಮ: ರಾಜೀವ್‌ ಆವಾಸ್‌ ಯೋಜನೆಯಡಿ ನಿರ್ಮಿಸಲಾದ ಮನೆಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅಹಿಂದ ಚಿಂತಕರ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ನಗರದ ಜಾಫರಾಬಾದ್‌ ಸರ್ವೇ ನಂ.21/1ರಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಅರ್ಹ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡದೆ ಅಕ್ರಮ ಮತ್ತು ಅವ್ಯವಹಾರ ನಡೆಸಲಾಗಿದೆ. ನೈಜ ಫಲಾನುವಿಗಳನ್ನು ಬಿಟ್ಟು ಉಳ್ಳವರಿಗೆ ಮನೆ ಹಂಚಿಕೆ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ಕೈಗೊಂಡು ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಮಹಾನಗರ ಪಾಲಿಕೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರ್ಹರಿಗೆ ಪುನಃ ಮನೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಲಾಯಿತು. ವೇದಿಕೆ ಅಧ್ಯಕ್ಷ ಸೈಬಣ್ಣ ಜಮಾದಾರ, ಮುಖಂಡರಾದ ರಮೇಶ ಹಡಪದ, ಸಂಜು ಹೋಡಲ್ಕರ್‌, ಪ್ರಕಾಶ ಪಟ್ಟೇದಾರ, ಬಕ್ಕಪ್ಪ ಹಾಗೂ ಜಾಫರಾಬಾದ ಕೊಳಗೇರಿ ನಿವಾಸಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next