ಹುಣಸೂರು: ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ತಡೆಗೋಡೆ ಮುರಿದು ಬಿದ್ದು ಅಪಾಯ ತಂದೊಡ್ಡಿದ್ದರೂ ದುರಸ್ತಿ ಮಾಡದಿರುವುದನ್ನು ಖಂಡಿಸಿ, ತಾಲೂಕಿನ ಕಸಬಾ ಹೋಬಳಿಯ ರಾಮಪಟ್ಟಣ ಗ್ರಾಮದ ಬಳಿ ಹಳ್ಳಿಗರು ಸೇತುವೆ ಮೇಲೆ ಟ್ರ್ಯಾಕ್ಟರ್‌ನಲ್ಲಿ ಮಣ್ಣು ತಂದು ಸುರಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ, ತಂಬಾಕು ಬೆಳೆಗಾರರ ಕ್ಷೇಮಾಭಿವದ್ಧಿ ಸಂಘದ ಮಾಜಿ ಅಧ್ಯಕ್ಷ ಉಂಡುವಾಡಿ ಚಂದ್ರೇಗೌಡ ಮಾತನಾಡಿ, ಮಾಜಿ ಸಚಿವ ದಿ.ಎಚ್.ಎಲ್.ತಿಮ್ಮೇಗೌಡರ ಅವಧಿಯಲ್ಲಿ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಸುಮಾರು 25 ಗ್ರಾಮಗಳ ತಂಬಾಕು ಬೆಳೆಗಾರರಿಗೆ ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಗೆ ತೆರಳಲು ಸಮೀಪದ ರಸ್ತೆಯಾಗಿ 25 ವರ್ಷಗಳ ಹಿಂದೆ ಈ ಸೇತುವೆಯನ್ನು ನಿರ್ಮಿಸಿದ್ದರು. ಸೇತುವೆಯ ಎರಡೂ ಬದಿಯ ತಡೆಗೋಡೆಗಳು ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ಜಿಪಂ ಎಂಜಿನಿಯರಿಂಗ್ ವ್ಯಾಪ್ತಿಯ ಈ ಸೇತುವೆಯ ಮೇಲೆ ತುಂಬಾ ಹಳ್ಳಕೊಳ್ಳವಾಗಿದ್ದಾಗ ಸೇತುವೆ ಮೇಲಿನ ರಸ್ತೆಯನ್ನು ಆರ್ಧ ಭಾಗ ಮಾತ್ರ ಕಾಂಕ್ರಿಟ್‌ರಸ್ತೆ ನಿರ್ಮಿಸಿದ್ದು, ಉಳಿದರ್ಧ ಭಾಗವನ್ನು ಹಾಗೆ ಬಿಟ್ಟಿದ್ದು ಗುಂಡಿ ಬಿದ್ದಿದ್ದು ಒಡಾಡಲಾಗದ ಸ್ಥಿತಿ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಜನಪ್ರತಿನಿಧಿಗಳು-ಅಧಿಕಾರಿಗಳಿಗೆ ತಿಳಿದಿದ್ದರೂ ಯಾವ ಕ್ರಮವಹಿಸುತ್ತಿಲ್ಲಾ, ಈ ಸೇತುವೆ ದುರಸ್ತಿಗೆ ಏನಾದರೂ ಅನಾಹುತ ಸಂಭವಿಸಬೇಕೆ ಎಂಬಂತಾಗಿದೆ. ಈಗಲಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ಸೇತುವೆ ಅಭಿವದ್ಧಿಪಡಿಸಬೇಕು. ಇಲ್ಲದಿದ್ದರೆ ಸುತ್ತಮುತ್ತಲ ಗ್ರಾಮಸ್ಥರೊಡನೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಜಯಶೀಲೇಗೌಡ, ಪುಟ್ಟನಾಯ್ಕ ಭಾಸ್ಕರ್ ರಾಮೇಗೌಡ, ಮಹದೇವ್, ಬಸವರಾಜು, ವೆಂಕಟೇಶ್, ಶಂಕರೇಗೌಡ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.