Advertisement

ಹೊಸ ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

12:27 PM Jan 18, 2022 | Team Udayavani |

ಕಲಬುರಗಿ: ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಕುರಿತು ಜ.14ರಂದು ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಹೊರಡಿಸಿರುವ ಆದೇಶ ಹಿಂಪಡೆದು ಸೇವಾ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

Advertisement

ಸೇವಾ ಭದ್ರತೆ ಮತ್ತು ಸೇವಾ ವೀಲಿನತೆ ಆಗ್ರಹಿಸಿ ಕಳೆದ ಒಂದುವರೆ ತಿಂಗಳಿಂದ ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಲಾಗುತ್ತಿದೆ. ಆದರೆ, ಸಂಕ್ರಾಂತಿ ದಿನದಂದು ಸರ್ಕಾರ ಹೊಸ ಆದೇಶ ಹೊರಡಿಸಿ ಈಗಿರುವ ಎಂಟು ಗಂಟೆಗಳ ಕಾರ್ಯಭಾರವನ್ನು 15 ಗಂಟೆಗಳಿಗೆ ಹೆಚ್ಚಿಸಿ ಮತ್ತು ವೇತನವನ್ನು ದುಪ್ಪಟ್ಟು ಮಾಡಿದ್ದೇವೆ ಎಂದು ಹೇಳುತ್ತಿದೆ. ಇದರಿಂದ ಈಗಿರುವ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿ ಬೀಳುತ್ತಾರೆ ಹೊರತು ಯಾವುದೇ ಅನುಕೂಲವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ 14,500 ಜನ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಈಗ 15 ಗಂಟೆಗಳ ಕಾರ್ಯಭಾರದ ಅವಧಿ ಹೆಚ್ಚಳ ಮಾಡಿ ಇಬ್ಬರು ಶಿಕ್ಷಕರ ಬದಲಿಗೆ ಒಬ್ಬರನ್ನೇ ಉಳಿಸಿಕೊಂಡ ಅವರಿಂದಲೇ 15 ಗಂಟೆಗಳ ದುಡಿಸಿಕೊಳ್ಳುವ ತಂತ್ರ ಮಾಡಲಾಗಿದೆ. ಹೀಗಾಗಿ ಅರ್ಧಕ್ಕೆ ಅರ್ಧಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವಂತೆ ಆಗಲಿದೆ. ಅಲ್ಲದೇ, ಅತಿಥಿ ಉಪನ್ಯಾಸಕರ ಮಧ್ಯೆ ಸರ್ಕಾರವೇ ಒಡೆದು ಆಳುವ ನೀತಿಯನ್ನು ಅನುಸರಿಸಲು ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಪ್ರಸಕ್ತ ಸೆಮಿಸ್ಟರ್‌ಗೆ ನವೆಂಬರ್‌ ತಿಂಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಹೊಸ ಆದೇಶದ ಪ್ರಕಾರ ಮತ್ತೆ ಈಗ ನೇಮಕಾತಿ ಪ್ರಕ್ರಿಯೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಈಗಾಗಲೇ ಸೇವೆಯಲ್ಲಿರುವ ಉಪನ್ಯಾಸಕರು ಪಾಡೇನು ಎಂಬ ಬಗ್ಗೆಯೂ ಸರ್ಕಾರ ಯೋಚನೆ ಮಾಡಿಲ್ಲ. ಏಕಾಏಕಿ ತೆಗೆದು ಕೆಲಸದಿಂದ ತೆಗೆದುಹಾಕಿದರೆ ಹೇಗೆ ಜೀವನ ನಡೆಸಬೇಕು ಎಂಬ ಕುರಿತಾದರೂ ಸರ್ಕಾರ ಆಲೋಚನೆ ಮಾಡಬೇಕಿತ್ತು. ಆದರೆ, ತಾತ್ಕಾಲಿಕ ಉದ್ಯೋಗವನ್ನೂ ಕಸಿದುಕೊಂಡು ಬೀದಿ ತಳ್ಳಲು ಸರ್ಕಾರವೇ ಮುಂದಾಗಿದೆ ಎಂದು ಪ್ರತಿಭಟನಾ ನಿರತ ಉಪನ್ಯಾಸಕರು ಕಿಡಿಕಾರಿದರು.

ಆದ್ದರಿಂದ ತಕ್ಷಣವೇ ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾದ ಹೊಸ ಆದೇಶವನ್ನು ಸರ್ಕಾರ ರದ್ದು ಮಾಡಬೇಕು. ನ್ಯಾಯೋಚಿತ ಬೇಡಿಕೆಯಾದ ಸೇವಾ ಭದ್ರತೆ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳು ಮೂಲಕ ಮುಖ್ಯ ಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿ ಗೆ ಅತಿಥಿ ಉಪನ್ಯಾಸಕರು ಸಲ್ಲಿಸಿದರು.

Advertisement

ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಅಣವೀರಪ್ಪ ಬೊಳವಾಡ, ವಿಭಾಗೀಯ ಅಧ್ಯಕ್ಷ ವಿಜಯಕುಮಾರ ಕಾಂಬಳೆ, ಉಪಾಧ್ಯಕ್ಷೆ ಡಾ| ಶರಣಪ್ಪ ಪಾಟೀಲ, ಜಿಲ್ಲಾ ಕಾರ್ಯದರ್ಶಿಗಳಾದ ವೈಜನಾಥ ಭಾವಿ, ಡಾ|ಜ್ಞಾನಮಿತ್ರ ಬಿ. ಹಾಗೂ ಮಹಿಳಾ ಪ್ರತಿನಿಧಿಗಳಾದ ಡಾ|ಅವ್ವಮ್ಮ ಕೆ., ಡಾ|ಮಮತಾ ಪಾಟೀಲ ಸೇರಿ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next