Advertisement

ಶಾಲೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

03:44 PM Jun 19, 2022 | Team Udayavani |

ಕೆ.ಆರ್‌.ನಗರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ತರಗತಿಯ ಕೊಠಡಿಗಳು ಶಿಥಿಲಗೊಂಡಿದ್ದು, ಪಾಠ ಪ್ರವಚನಗಳು ಕುಂಠಿತವಾಗಿ ವ್ಯಾಸಂಗಕ್ಕೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

Advertisement

ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಕಾಲೇಜು ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದ್ದರೂ ತರಗತಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಕೊಠಡಿಗಳ ಮೇಲ್ಛಾವಣಿ ಕುಸಿದು ಬೀಳುತ್ತಿರುವುದರಿಂದ ಉಪನ್ಯಾಸಕ ರುಗಳು ಬೋಧನೆ ಮಾಡಲು ಭಯಪಟ್ಟು ತರಗತಿಗಳಿಗೆ ಹಾಜರಾಗುತ್ತಿಲ್ಲ. ಇದರಿಂದ ನಮಗೆ ಶೈಕ್ಷಣಿಕವಾಗಿ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಕೇಳುವವರು ಯಾರು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಪ್ರಶ್ನಿಸಿದರು.

ಕಾಲೇಜು ಆವರಣದಲ್ಲಿ ನಡೆಯುವ ಬಿಎಸ್‌ಸಿ, ಬಿಕಾಂ, ಎಂಎ ಸೇರಿದಂತೆ ಇತರ ತರಗತಿಗಳಿಗೆ ಸುಸಜ್ಜಿತ ಕಟ್ಟಡ ಒದಗಿಸಿದ್ದು, ಕಲಾ ವಿಭಾಗವನ್ನು ಕಡೆಗಣಿಸಿರುವುದು ಯಾವ ನ್ಯಾಯ ಎಂದು ವಿದ್ಯಾರ್ಥಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕೊಠಡಿ ಸಮಸ್ಯೆಯ ಜತೆಗೆ ಶೌಚಾಲಯವೂ ದುಸ್ಥಿತಿಯಲ್ಲಿದ್ದು,ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶೌಚಕ್ಕೆ ಪರದಾಡುವ ಸ್ಥಿತಿ ಎದುರಾಗಿದ್ದು, ನಮ್ಮ ಸಮಸ್ಯೆಯನ್ನು ಹತ್ತಾರು ಬಾರಿ ಪ್ರಾಂಶುಪಾಲರಿಗೆ ಅರಿಕೆ ಮಾಡಿದರೂ ಸಂಕಷ್ಟಕ್ಕೆ ಸ್ಪಂದಿಸುವವರು ಇಲ್ಲವಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಕಾಲೇಜು ಆವರಣದಲ್ಲಿ ಕ್ಯಾಂಟೀನ್‌ ಕಟ್ಟಡ ನಿರ್ಮಾಣವಾಗಿ ಎರಡು ವರ್ಷಗಳು ಕಳೆದರೂ ಈವರೆಗೆ ಅದು ಆರಂಭವಾಗಿಲ್ಲ. ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲಿಲ್ಲ. ಇದರೊಂದಿಗೆ ಗ್ರಂಥಾಲಯದಲ್ಲೂ ನಮ್ಮ ಓದಿಗೆ ಸೂಕ್ತ ಸ್ಥಳಾವಕಾಶವಿಲ್ಲದೆ ಕಂಗಾಲಾಗಿದ್ದು, ಶಾಸಕರು ಮತ್ತು ಸರ್ಕಾರ ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಕ್ಕೊತ್ತಾಯ ಮಂಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next