Advertisement

ಐಎಂಎ ಪ್ರಕರಣ ಸಿಬಿಐಗೆ ಒಪ್ಪಿಸಲು ಒತ್ತಾಯಿಸಿ ಧರಣಿ

01:00 AM Jun 16, 2019 | Lakshmi GovindaRaj |

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಇದೇ ರೀತಿಯಲ್ಲಿ ಈ ಹಿಂದೆ ನಡೆದಿರುವ ವಿವಿಧ ವಂಚನೆ ಪ್ರಕರಣಗಳನ್ನೂ ಕೂಡಲೇ ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಶನಿವಾರ ಟೌನ್‌ಹಾಲ್‌ನ ಮುಂದೆ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರವಿಕೃಷ್ಣ ರೆಡ್ಡಿ, ಬಡವರು ಹಣ ಕಳೆದುಕೊಂಡರೆ ಅದಕ್ಕೆ ಬೆಲೆಯೇ ಇಲ್ಲ ಎನ್ನುವಂತಾಗಿದೆ. ಐಎಂಎ ಮಾಲೀಕ ಮನ್ಸೂರ್‌ ಖಾನ್‌ನನ್ನು ಕೂಡಲೇ ಬಂಧಿಸಬೇಕು. ಬಡವರ ಹಣ ಮತ್ತೆ ಅವರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

“ಈ ಹಿಂದೆಯೂ ಇದೇ ರೀತಿಯಲ್ಲಿ ಹಲವು ಕಂಪನಿಗಳು ಬಡವರ ಹಣವನ್ನು ದೋಚಿವೆ. ಆದರೆ, ಇಲ್ಲಿಯವರೆಗೆ ಯಾರಿಗೂ ಶಿಕ್ಷೆ ಆಗಿಲ್ಲ. ಇಂತಹ ವಂಚನೆಯ ಪ್ರಕರಣಗಳ ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕು. ಪೊಲೀಸರು ಐಎಂಎ ವಂಚನೆ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಕೂಡಲೇ ಸಲ್ಲಿಸಬೇಕು’ ಎಂದರು.

“ಅಯೋಗ್ಯ ರಾಜಕಾರಣಿಗಳಿಂದ ನ್ಯಾಯ ಸಿಗುವುದಿಲ್ಲ. ಇಷ್ಟು ದೊಡ್ಡ ವಂಚನೆ ನಡೆಯುವವರೆಗೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಕತ್ತೆ ಕಾಯುತ್ತಿದ್ದರು. ಆ ಕತ್ತೆಗಳು ಯಾರು ಎಂದರೆ ರಾಜಕಾರಣಿಗಳು. ಈಗ ಮೋಸ ಹೋದವರಿಂದ ಬನ್ನಿ ಎಫ್ಐಆರ್‌ ದಾಖಲಿಸಿ ಎಂದು ಪೊಲೀಸರು ಹೇಳುತ್ತಿದ್ದಾರೆ’ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐಎಂಎ ಜ್ಯುವೆಲ್ಸ್‌ ಮಾಲೀಕನ ಬಂಧನಕ್ಕೆ ಆಗ್ರಹ
ಬೆಂಗಳೂರು: ವಂಚಿಸಿ ತಲೆಮರಿಸಿಕೊಂಡಿರುವ ಐಎಂಎ ಜ್ಯುವೆಲ್ಸ್‌ ಮಾಲೀಕ ಮನ್ಸೂರ್‌ ಖಾನ್‌ನನ್ನು ಕೂಡಲೇ ಬಂಧಿಸಿ ಹೂಡಿಕೆದಾರರಿಗೆ ನ್ಯಾಯ ಒದಗಿಸಬೇಕೆಂದು ಆಲ್‌ ಇಂಡಿಯಾ ಮಜಿಸೆ-ಇತ್ತೆಹದುಲ್‌ ಮುಸ್ಲಿಮೀನ್‌ ಸಂಘಟನೆಯ ಅಧ್ಯಕ್ಷ ಮಹಮದ್‌ ಇಬ್ರಾಹಿಂ ಒತ್ತಾಯಿಸಿದರು.

Advertisement

ಶನಿವಾರ ಪ್ರಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಮಂದಿ ಬಡವರು, ಅನಕ್ಷರಸ್ತರು ತಾವು ಕಷ್ಟ ಪಟ್ಟು ದುಡಿದ ಗಣವನ್ನು ಹೆಚ್ಚಿನ ಬಡ್ಡಿ ಸಿಗುತ್ತದೆ ಎಂದು ಐಎಂಎಯಲ್ಲಿ ಹೂಡಿಕೆ ಮಾಡಿದ್ದರು. ಆದರೆ, ಮನ್ಸೂನ್‌ ಖಾನ್‌ ಅವರೆಲ್ಲರ ನಂಬಿಕೆಗೂ ಮೋಸ ಮಾಡಿ ಪರಾರಿಯಾಗಿದ್ದಾನೆ. ಆತನನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಹಣ ಕಳೆದುಕೊಂಡವರ ಪೈಕಿ ಕೆಲವು ಕುಟುಂಬಗಳು ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೂಡಿಕೆ ಕುರಿತು ಪತಿ, ಪತ್ನಿಯರಲ್ಲಿ ಬಿರುಕು ಉಂಟಾಗಿ ವಿಚೇಧನವಾಗುತ್ತಿವೆ. ಇನ್ನು ಮೌಲ್ವಿಗಳು ಧಾರ್ಮಿಕ ಚಿಂತನೆಗಳ ಕುರಿತು ಜಾಗೃತಿ ಮೂಡಿಸಬೇಕೆ ಹೊರತು, ಒಂದು ಕಂಪನಿ ಪರ ನಿಲ್ಲುವುದು ಅಲ್ಲಿ ಹಣ ಹೂಡುವಂತೆ ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದ ಅವರು ರಾಜಕಾರಣಿ ಒಳಗೊಂಡಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next