ಕಲಬುರಗಿ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಮತ್ತು ಬೆಲೆ ಏರಿಕೆ ತಡೆಗಟ್ಟಬೇಕು ಎಂದು ಆಗ್ರಹಿಸಿ ಜಿಲ್ಲಾ ಜಾತ್ಯತೀತ ಜನತಾದಳ ಕಾರ್ಯಕತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ, ರಾಜ್ಯದಲ್ಲಿ ವಿಪರೀತ ಮಳೆಯಾಗಿದೆ. ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅತಿಯಾದ ಮಳೆಯಿಂದ ಬೆಳೆ ಹಾನಿಯಾಗಿವೆ. ಮನೆಗಳು ಕುಸಿದು ಬಿದ್ದಿವೆ. ಜಾನುವಾರುಗಳು, ಜನರು ಸಂಕಷ್ಟ ಎದುರಿಸುವಂತಾಗಿದೆ.
ರಾಜ್ಯದಲ್ಲಿ ಇದುವರೆಗೆ ಮನೆಗಳ ಕುಸಿತದಿಂದ 13 ಜನ ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 40 ಮನೆಗಳು ಕುಸಿದು ಬಿದ್ದಿವೆ. ಮನೆ ಕುಸಿತದಿಂದ ಹಾನಿಯಾದ ಕುಟುಂಬಕ್ಕೆ 10 ಸಾವಿರ ಪರಿಹಾರ ಘೋಷಣೆ ಮಾಡಿದ್ದು, ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಇನ್ನು ಸಾವನ್ನಪ್ಪಿದವರ ಬಗ್ಗೆ ಸರ್ಕಾರ ಮಾತೇ ಆಡುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಇದುವರೆಗೆ ಸಚಿವರು, ಸಂಸದರು ಮತ್ತು ಶಾಸಕರು ನೆರೆ ಸಂತ್ರಸ್ತರನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಿಲ್ಲ. ಮಳೆಯಿಂದ ಹಾನಿಯಾದ ಕುಟುಂಬಕ್ಕೆ 50 ಸಾವಿರ, ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರೆಗೆ 50 ಸಾವಿರ,ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು, ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವುದನ್ನು ತಡೆಗಟ್ಟಬೇಕು ಎಂದು ಜಿಲ್ಲಾಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಪತ್ರದಲ್ಲಿ ಆಗ್ರಹಿಸಲಾಯಿತು.
ಪಕ್ಷದ ಮುಖಂಡರಾದ ಶ್ಯಾಮರಾವ್ ಸೂರನ್, ಬಸವರಾಜ ಬಿರಬಿಟ್ಟಿ, ಮನೋಹರ ಪೋದ್ದಾರ, ಅಲಿಮ ಇನಾಮದಾರ, ಶಿವಾನಂದ ದ್ಯಾಮಗೊಂಡ, , ಶಂಕರ ಕಟ್ಟಿಸಂಗಾವಿ, ಶ್ರೀನಿವಾಸ ಜಮಾದಾರ, ಮಲ್ಲಿಕಾರ್ಜುನ ಸಂಗಾಣಿ, ಬಸವರಾಜ ಸಿದ್ರಾಮಗೋಳ ಏಸು ಮಿತ್ರ, ಶರಣು ಹೊಸಮನಿ, ಸುನಿತಾ ಕೋರವಾರ, ಮಹಾದೇವ ಕೆಸರಟಗಿ, ಸಿದ್ರಾಮಪ್ಪ ಹೊದಲೂರ, ಅನಿಲ ಕಡಗಂಚಿ, ಆನಂದಕುಮಾರ ಬುಗಡಿ, ರಘು ಸುಕೆ, ಇತರರು ಇದ್ದರು.