Advertisement

ಗದುಗಿಗೆ ಬಸ್‌ ಬಿಡಲು ಆಗ್ರಹಿಸಿ ಪ್ರತಿಭಟನೆ

02:30 PM Jan 11, 2020 | Suhan S |

ಲಕ್ಷ್ಮೇಶ್ವರ: ಗದುಗಿಗೆ ಹೋಗಲು ಬೆಳಗಿನ ವೇಳೆ ಬಸ್‌ ಸೌಲಭ್ಯ ಕಡಿಮೆಯಿದೆ. ಹೀಗಾಗಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆ ಹಾಗೂ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕಾರಣ ಪ್ರತಿನಿತ್ಯ ಬೆಳಗ್ಗೆ ಗದಗ ನಗರಕ್ಕೆ ಹೋಗಲು ಸಾಕಷ್ಟು ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಎಬಿವಿಪಿ ಕಾರ್ಯಕರ್ತ ಮಹಾಂತೇಶ ಮಣಕವಾಡರ ನೇತೃತ್ವದಲ್ಲಿ ನೂರಾರು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಬಸ್‌ ತಡೆದು ಪ್ರತಿಭಟಿಸಿದರು.

Advertisement

ಘಟಕ ವ್ಯವಸ್ಥಾಪಕರು ಬರುವವರೆಗೆ ಬಸ್‌ ಬಿಡುವುದಿಲ್ಲ ಎಂದು ಹುಬ್ಬಳ್ಳಿ ಮತ್ತು ಗದಗ ಕಡೆ ಹೋಗುವ ಬಸ್‌ ಬಂದ್‌ ಮಾಡಿದರು. ಪ್ರತಿದಿನ ಬಸ್‌ ಕೈಕೊಡುವುದರಿಂದ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಬೆಳಗ್ಗೆ ಬಸ್‌ ಸೌಲಭ್ಯ ಹೆಚ್ಚಿಸುವಂತೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂದು ಮಣಕವಾಡ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಕಾರರ ಒತ್ತಾಯದ ಮೇರೆಗೆ ನಿಲ್ದಾಣಕ್ಕೆ ಆಗಮಿಸಿದ ಘಟಕ ವ್ಯವಸ್ಥಾಪಕ ಕೆ. ಶೇಖರ ನಾಯಕ ವಿರುದ್ಧ ಪ್ರಯಾಣಿಕರು ಹರಿಹಾಯ್ದರು. ಈ ವೇಳೆ ಮಾತನಾಡಿದ ಘಟಕ ವ್ಯವಸ್ಥಾಪಕರು, ಬೇರೆ ಬೇರೆ ಘಟಕಗಳ ಬಸ್‌ಗಳು ಬರಲು ತಡವಾಗಿದ್ದರಿಂದ ಸಮಸ್ಯೆ ಉಂಟಾಗಿದೆ. ಅಲ್ಲದೆ ಹುಣ್ಣಿಮೆ ಆಗಿರುವುದರಿಂದ ಪ್ರಯಾಣಿಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದ ಅವರು, ಗದಗ ಕಡೆ ತೆರಳುವ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್‌ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿ ಬಸ್‌ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next