Advertisement

ಮಾರುಕಟ್ಟೆ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಪ್ರತಿಭಟನೆ

03:02 PM Jun 17, 2017 | Team Udayavani |

ಧಾರವಾಡ: ಇಲ್ಲಿಯ ಸೂಪರ್‌ ಮಾರುಕಟ್ಟೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕಿರಾಣಿ, ಕಾಳುಕಡಿ ಕಾಯಿಪಲ್ಲೆ ವರ್ತಕರ ಸಂಘದ ವತಿಯಿಂದ ಇಲ್ಲಿನ ವಲಯ ಕಚೇರಿ-2ರ ಎದುರು ಶುಕ್ರವಾರ  ಪ್ರತಿಭಟನೆ ನಡೆಸಿದರು. 

Advertisement

ಸೂಪರ್‌ ಮಾರುಕಟ್ಟೆಯಲ್ಲಿನ ಕುಡಿಯುವ ನೀರು, ಶೌಚಗೃಹ, ಸರಿಯಾದ ಕಸ ವಿಲೇವಾರಿ ಮಾಡುವಂತೆ ಪಾಲಿಕೆ ಆಯುಕ್ತರು ಹಾಗೂ ಮೇಯರ್‌ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕೂಡಲೇ ಎಲ್ಲ ಸೌಕರ್ಯಗಳನ್ನು ನೀಡುವ ಮೂಲಕ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದರು. 

ಮಾರುಕಟ್ಟೆಯಲ್ಲಿ ಜನಸಂಪರ್ಕ ಸಭೆ, ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಚಾಲ್ತಿ ಮಾಡುವುದು, ಹೈಮಾಸ್ಟ್‌ ದೀಪದ ವ್ಯವಸ್ಥೆ, ಚೀಟಿ ಹರಿಯುವವರ ದಬ್ಟಾಳಿಕೆ ತಡೆಯುವುದು, ಸಮರ್ಪಕ ರಸ್ತೆ ನಿರ್ಮಾಣ, ಸಂಬಂಧಪಟ್ಟ ಅಧಿಕಾರಿಗಳಿಂದ ನಿತ್ಯ ಮಾರುಕಟ್ಟೆ ಪರಿಶೀಲನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು  ಈಡೇರಿಸಬೇಕು ಎಂದು ಒತ್ತಾಯಿಸಿದರು. 

ಕೆಲ ದಿನಗಳ ಹಿಂದೆ ಸಹ ಮೇಯರ್‌ ಭೇಟಿ ನೀಡಿದ  ಸಂದರ್ಭದಲ್ಲಿ ಈ ಕುರಿತು ಮನವಿ ಸಲ್ಲಿಸಲಾಗಿದೆ. ಹೀಗಾಗಿ ನಮ್ಮ ಎಲ್ಲ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಯಿತು. ಈ ಕುರಿತಂತೆ ವಲಯ ಕಚೇರಿ ಆಯುಕ್ತರ ಮೂಲಕ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next