ಕಲಬುರಗಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹಿಸಿ ಸೆ.24ರಂದು ಕಲಬುರಗಿಯಲ್ಲಿ ನಡೆಸುತ್ತಿರುವ ಮಹಾರ್ಯಾಲಿಯಿಂದ ವೀರಶೈವ-ಲಿಂಗಾಯತ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೂವರು ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವೀರಶೈವ ಲಿಂಗಾಯತ ಸಮನ್ವಯ ಸಮಿತಿ ಆಗ್ರಹಿಸಿದೆ.
ಶುಕ್ರವಾರ ನಗರದಲ್ಲಿ ಪಾದಯಾತ್ರೆ ಮಾಡುವ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವ ಸಮಿತಿ ಸದಸ್ಯರು, ವೀರಶೈವ ಲಿಂಗಾಯತ ಒಂದೇ ಆಗಿದೆ. ಗುರು-ವಿರಕ್ತರು ಸಮಾನತೆಯ ಸ್ನೇಹಪರವಾಗಿದ್ದಾರೆ. ಆದಾಗ್ಯೂ, ಸಮಾಜವನ್ನು ಒಡೆಯುವ ಉದ್ದೇಶದಿಂದಲೇ ಕಾಂಗ್ರೆಸ್ ಸರ್ಕಾರ ಕೈಹಾಕಿದೆ.
ವೀರಶೈವ-ಲಿಂಗಾಯತರ ಕುರಿತು ಸರ್ಕಾರಕ್ಕೆ ಕಾಳಜಿ ಇದ್ದರೆ ಶೇಕಡಾ 15ರಷ್ಟು ಮೀಸಲಾತಿಯನ್ನು ಸಮಾಜಕ್ಕೆ ಕಲ್ಪಿಸಬೇಕು. ಅದನ್ನು ಬಿಟ್ಟು ಪ್ರತ್ಯೇಕ ಧರ್ಮದ ಆಸೆ ಹುಟ್ಟಿಸುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಸೆ. 24ರಂದು ನಡೆಯುವ ಸಮಾವೇಶಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ, ಸಚಿವ ವಿನಯ ಕುಲಕರ್ಣಿ ಅವರು ಸಚಿವರಾಗಿದ್ದುಕೊಂಡು ಧರ್ಮ ಒಡೆಯವ ಕೆಲಸ ಮಾಡುತ್ತಿದ್ದಾರೆ. ಇದು ಸಾಂವಿಧಾನಿಕ ಅಪಾಚಾರ ಎಂದು ದೂರಿದ್ದಾರೆ.
ರಾಜ್ಯದಲ್ಲಿ ನೀರಾವರಿ ಯೋಜನೆಗಳು ವಿಫಲವಾಗಿವೆ. ರೈತರು ಕಂಗಾಲಾಗಿದ್ದಾರೆ. ಈ ಹಂತದಲ್ಲಿ ಧರ್ಮದ ಕುರಿತು ಮಾತನಾಡುವ ಇವರು ನೈತಿಕತೆ ಕಳೆದುಕೊಂಡಿದ್ದಾರೆ. ಅಲ್ಲದೆ, ಸಮಾವೇಶಕ್ಕಾಗಿ ಸರಕಾರಿ ಯಂತ್ರಾಂಗವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತದೆ ಎಂದು ದೂರಿದ್ದಾರೆ.
ಸಮಿತಿಯ ವಿಭಾಗೀಯ ಅಧ್ಯಕ್ಷ ಚಂದ್ರಶೇಖರ್ ಹಿರೇಮಠ, ಕಡಗಂಚಿ ವೀರಭದ್ರ ಶಿವಾಚಾರ್ಯರು, ವಿ.ಕೆ. ಸಲಗರ್‌ನ ಸಾಂಬ ಶಿವಾಚಾರ್ಯರು, ಮಾಜಿ ಮಹಾಪೌರ ಧರ್ಮಪ್ರಕಾಶ ಪಾಟೀಲ್, ಕರಿಸಿದ್ದಪ್ಪ ಪಾಟೀಲ, ಸಿದ್ರಾಮಪ್ಪ ಆಲಗೂಡಕರ್, ವೀರಭದ್ರಪ್ಪ ವರದಾನಿ, ಸಂತೋಷ ಹರಸೂರ, ಬಸವರಾಜ್ ಕಿಣಗಿ, ಬಸವರಾಜ ಬೀರಬಟ್ಟಿ, ವೀರಣ್ಣಾ ಸೇಡಂ, ಶಿವಲಿಂಗ ಆಲಗೂಡಕರ್, ಮಲ್ಲಿಕಾರ್ಜುನ ಖಂಡು, ಎಂ.ಎಸ್. ಪಾಟೀಲ ನರಿಬೋಳ ಇತರರು ಇದ್ದರು.