Advertisement

ಸಂತೋಷ್‌ನಗರದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ; ಆಕ್ರೋಶ

11:47 PM Feb 17, 2020 | Sriram |

ಹೆಮ್ಮಾಡಿ: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಂತೊಷ್‌ನಗರದಲ್ಲಿ ಹಿಂದೂ ರುದ್ರಭೂಮಿಗೆ ಮೀಸಲಿಟ್ಟ ಜಾಗದಲ್ಲಿ ಜಿಲ್ಲಾ ಪಂಚಾಯತ್‌ನಿಂದ ಬಿಡುಗಡೆಯಾದ ಅನುದಾನದಲ್ಲಿ ಸಾರ್ವಜನಿಕ ಬಾವಿ ನಿರ್ಮಾಣಕ್ಕೆ ಮುಂದಾಗಿರುವುದು ಗ್ರಾಮಸ್ಥರ ಆಕ್ರೋಶ ಕಾರಣ ವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸ್ಥಳೀಯ ಗ್ರಾಮ ಸ್ಥರೆಲ್ಲ ಸೇರಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.

Advertisement

ಹೆಮ್ಮಾಡಿ ಗ್ರಾ.ಪಂ.ನ ಎಲ್ಲ ಹಿಂದೂಗಳಿಗೆ ಹೆಣ ಸುಡಲು ಇರುವ ರುದ್ರಭೂಮಿ ಇದೊಂದೆ ಆಗಿದೆ. 10 ಸೆಂಟ್ಸ್‌ ಜಾಗದಲ್ಲಿರುವ ಈ ರುದ್ರಭೂಮಿಯ ದುರಸ್ತಿಗೆ ಪಂಚಾಯತ್‌ ಈವರೆಗೆ ಮುಂದಾಗಿಲ್ಲ. ಆದರೆ ಅದರ ಜಾಗದಲ್ಲಿ ಈಗ ಬಾವಿ ತೋಡಲು ಮುಂದಾಗಿದ್ದೀರ. ಸಾರ್ವಜನಿಕರ ನೀರಿಗಾಗಿ ಬಾವಿ ಬೇಕು ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅದಕ್ಕೆ ಪಂಚಾಯತ್‌ ವ್ಯಾಪ್ತಿಯಲ್ಲಿ ಬೇರೆ ಬೇರೆ ಕಡೆ ಇರುವ ಜಾಗವನ್ನು ಬಳಸಿಕೊಳ್ಳಬಹುದು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.

ಬೇರೆ ಜಾಗ ಇಲ್ಲವೇ?
ಇದು ಹೆಮ್ಮಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿಯೇ ಇರುವ ಎತ್ತರದ ಪ್ರದೇಶ. ಇಲ್ಲಿ ನೀರು ಕೆಳಮಟ್ಟದಲ್ಲಿದೆ. ಇಲ್ಲಿ ಬಾವಿ ತೋಡಿದರೂ ನೀರಿನ ಲಭ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಇಲ್ಲಿ ತೋಡಲು ಮುಂದಾಗಿರುವುದು ಎಷ್ಟು ಸರಿ. ಪಂಚಾಯತ್‌ ಅಧೀನದ ಸರಕಾರಿ ಜಾಗ ಇದ್ದರೂ, ಅದನ್ನು ಕೆಲವರ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವು ಮಾಡಿ, ಅಲ್ಲಿ ಬಾವಿ ತೊಡಲಿ ಎಂದು ಪ್ರತಿಭಟನಕಾರರರಾದ ಜನಾರ್ದನ ಪೂಜಾರಿ ಆಗ್ರಹಿಸಿದರು.

ಇನ್ನು ಪ್ರತಿಭಟನಾ ಸ್ಥಳಕ್ಕೆ ಜಿ.ಪಂ. ಸದಸ್ಯ ಶೋಭಾ ಜಿ. ಪುತ್ರನ್‌ ಭೇಟಿ ನೀಡಿದ್ದು, ಇದು ರುದ್ರಭೂಮಿಗೆ ಮೀಸಲಿಟ್ಟ ಜಾಗವೆಂದು ಗೊತ್ತಿರಲಿಲ್ಲ. ಪಂಚಾಯತ್‌ನವರೇ ನಿರ್ಣಯ ಮಾಡಿ ತೋರಿಸಿದ ಜಾಗ. ಹಾಗಾಗಿ ಇಲ್ಲಿ ಬಾವಿ ತೆಗೆಯಲಾಗುತ್ತಿದೆ ಎಂದವರು ಸ್ಪಷ್ಟಪಡಿಸಿದರು.

ಬೇರೆಲ್ಲೋ ಸರಕಾರಿ ಜಾಗ ಇಲ್ಲದಿರು ವುದರಿಂದ ಹಾಗೂ ಕೆಲವು ಕಡೆಗಳಲ್ಲಿ ಜಾಗ ಇದ್ದರೂ ಅಲ್ಲಿ ನೀರಿನ ಪ್ರಮಾಣ ಅಷ್ಟೇನು ಇಲ್ಲದಿರುವ ಕಾರಣ ಪಂಚಾಯತ್‌ನಿಂದ ಇಲ್ಲಿ ಬಾವಿ ತೋಡಲು ನಿರ್ಧರಿಸಲಾಯಿತು ಎನ್ನುವುದಾಗಿ ಹೆಮ್ಮಾಡಿ ಗ್ರಾ.ಪಂ. ಪಿಡಿಒ ಮಂಜು ಬಿಲ್ಲವ ಪ್ರತಿಭಟನಾಕಾರರಿಗೆ ತಿಳಿಸಿದರು. ಸ್ಥಳೀಯ ಗ್ರಾ.ಪಂ. ಸದಸ್ಯೆ ಆಶಾ ಪಡುಮನೆ ಭೇಟಿ ನೀಡಿದರು.

Advertisement

ಈ ಪ್ರತಿಭಟನೆಯಲ್ಲಿ ರಾಘವೇಂದ್ರ ಕುಲಾಲ್‌, ರತ್ನಾಕರ ಪೂಜಾರಿ, ಪ್ರಶಾಂತ್‌ ಪಡುಮನೆ, ಆನಂದ ಪೂಜಾರಿ ಪಡುಮನೆ, ಉಮೇಶ್‌ ಮೊಗವೀರ, ಸಂತೋಷ್‌ ಮತ್ತಿತರರು ಪಾಲ್ಗೊಂಡಿದ್ದರು.

ಕಾಮಗಾರಿ ಸ್ಥಗಿತ
ಕಳೆದ 2-3 ದಿನಗಳಿಂದ ಇಲ್ಲಿ ಜಿ.ಪಂ. ಅನುದಾನದಲ್ಲಿ ಮಂಜೂರಾದ 8 ಲಕ್ಷ ರೂ. ವೆಚ್ಚದಲ್ಲಿ ಬಾವಿ ತೋಡುವ ಕಾಮಗಾರಿ ನಡೆಯುತ್ತಿತ್ತು. ಆದರೆ ಗ್ರಾಮಸ್ಥರಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಈಗ ಬಾವಿ ತೋಡುವ ಕಾರ್ಯವನ್ನು ಸ್ಥಳೀಯ ಪಂಚಾಯತ್‌ ಸ್ಥಗಿತಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next