ಚಿಂಚೋಳಿ: ತಾಲೂಕಿನ ಗೊಂಡ ಜಾತಿಯವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ತಾಲೂಕು ಗೊಂಡ ಸಂಘರ್ಷ ಸಮಿತಿ ಮುಖಂಡರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಗೊಂಡ ಸಮಾಜದ ಮುಖಂಡ ರೇವಣಸಿದ್ಧಪ್ಪ ಪೂಜಾರಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಗೊಂಡ ಜಾತಿಯನ್ನು 1935ರಲ್ಲಿ ಆಗಿನ ಬ್ರಿಟಿಷ ಸರ್ಕಾರದ ರಾಣಿ ಎಲಿಜಬೆತ್ ಅಧ್ಯಯನ ಮಾಡಿಸಿ, ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆದೇಶಿಸಿದ್ದರು.
ಸ್ವಾತಂತ್ರ್ಯ ಬಂದ ನಂತರ ಡಾ| ಬಾಬಾಸಾಹೇಬ ಅಂಬೇಡ್ಕರ್ ಗೊಂಡ, ರಾಜಗೊಂಡ, ಜೇನು ಕುರುಬ, ಕಾಡು ಕುರುಬ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಪಡೆದುಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಸರ್ಕಾರ ಕಾಲಕಾಲಕ್ಕೆ ಮನಬಂದಂತೆ ಆದೇಶಗಳನ್ನು ಬದಲಾವಣೆ ಮಾಡಿ ಗೊಂಡ ಜನಾಂಗದವರಿಗೆ ಕಿರುಕುಳವನ್ನು ನೀಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಸರ್ಕಾರ ಕೂಡಲೇ ಗೊಂಡ ಜಾತಿಯವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಮುಖಂಡ ಹಣಮಂತರಾವ್ ಪೂಜಾರಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರವು ಆಗಸ್ಟ್ 31ರಂದು ಹೊರಡಿಸಿದ ಆದೇಶದ ಪ್ರಕಾರ ಜಾತಿ ಪರಿಶೀಲನಾ ಸಮಿತಿ ಅಧಿಕಾರ ಕಿತ್ತುಕೊಂಡು ನಾಗರಿಕ ಹಕ್ಕು ಜಾರಿ ನಿರ್ದೇಶಾಲಯ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ. ಈ ಆದೇಶ ಕೇವಲ ಬೆಂಗಳೂರು, ಬೆಂಗಳೂರು ನಗರ, ಮೈಸೂರು, ದಾವಣಗೆರೆ, ಮಂಗಳೂರು, ಬೆಳಗಾವಿ, ಕಲಬುರಗಿ ಜಿಲ್ಲೆಗಳಿಗೆ ಮಾತ್ರ ಹೊರಡಿಸಲಾಗಿದೆ. ಇದನ್ನು ಗೊಂಡ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪ್ರತಿಭಟನೆಯಲ್ಲಿ ತಿಂಥಿಣಿ ಬ್ರಿಡ್ಜ್ ಕನಕಪೀಠ ಸುರಪುರದ ಪೂಜ್ಯ ಬೀರಲಿಂಗ ದೇವರು, ಶಿವಕುಮಾರ ಪೋಚಾಲಿ, ರೇವಣಸಿದ್ಧಪ್ಪ ಅಣವಾರ, ರವೀಂದ್ರ ಪೂಜಾರಿ ದಸ್ತಾಪುರ, ರಾಮಚಂದ್ರ ಪೂಜಾರಿ, ಗಂಗಾಧರ ಗಡ್ಡಿಮನಿ, ಸುರೇಶ ವೈದ್ಯರಾಜ, ಸಂತೋಷ ಮಾಳಪ್ಪನೋರ, ಗೋಪಾಲ ಗಾರಂಪಳ್ಳಿ, ರಾಜಕುಮಾರ ಖಂಡಗೊಂಡ ಮರಪಳ್ಳಿ, ಧನಂಜಯ ಬೀರನಳ್ಳಿ, ಮಾರುತಿ ಗಂಜಗಿರಿ ಹಾಗೂ ಗೊಂಡ ಸಮಾಜದ ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಂದಾಪುರ ಮಿನಿ ವಿಧಾನ ಸೌಧದ ವರೆಗೆ ಪ್ರತಿಭಟನೆ ನಡೆಯಿತು. ನಂತರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ವೆಂಕಟೇಶ ದುಗ್ಗನ್‌ಗೆ ಸಲ್ಲಿಸಿದರು