ಸುಬ್ರಹ್ಮಣ್ಯ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ನೇರ್ಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಲು ಇಲಾಖೆ ಮುಂದಾಗಿದೆ ಎಂದು ಆರೋಪಿಸಿ ಬುಧವಾರ ಶಾಲಾ ಬಳಿ ಶಾಲಾ ಮಕ್ಕಳು, ಪೋಷಕರು, ಗ್ರಾಮಸ್ಥರು, ಶಾಲಾ ಸಮಿತಿಯವರು, ಸಾರ್ವಜನಿಕರು ಸೇರಿಕೊಂಡು ಪ್ರತಿಭಟನೆ ನಡೆಸಿದರು.
ಸರಕಾರ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದೆ. ಆದರೆ ಶಾಲೆಗೆ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸದೇ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗುತ್ತಿದೆ. ಖಾಸಗಿ ಶಾಲೆಗಳನ್ನು ಬೆಳೆಸಲು ಸರಕಾರವೇ ಸರಕಾರಿ ಶಾಲೆಗೆ ಪೂರಕ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ಪ್ರತಿಭಟನೆಯಲ್ಲಿ ಭಗವಹಿಸಿದ ಸಾರ್ವಜನಿಕರು ಆರೋಪಿಸಿದರು. ನಾವು ನಡೆಸುತ್ತಿರುವ ಪ್ರತಿಭನೆಗೆ ಯಾವುದೇ ಮನ್ನಣೆ ನೀಡದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಛೇರಿ ವರೆಗೆ ನಮ್ಮ ನಡೆ ಎಂಬ ಘೋಷಣೆಯೊಂದಿಗೆ ಉಗ್ರ ಪ್ರತಿಭಟನೆ ನಡೆಸುವ ಒಂದು ಎಚ್ಚರಿಕೆ ನೀಡಿದರು.
ನೇರ್ಲ ಶಾಲೆಯಲ್ಲಿ ಮಕ್ಕಳ ಸಂಖ್ಯೆಗಿಂತ ಹೆಚ್ಚುವರಿಯಾಗಿ ಇಬ್ಬರು ಶಿಕ್ಷಕರಿದ್ದರು. ಆ ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಲು ಸರಕಾರ ಸೂಚನೆ ಮಾಡಲಾಗಿತ್ತು. ಇದೀಗ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನೂ ಸರಕಾರ ರದ್ದು ಮಾಡಿದೆ ಎಂದು ನೂಜಿಬಾಳ್ತಿಲ ಸಿಆರ್ಪಿಪಿ ಗೋವಿಂದ ನಾಯಕ್ ಪ್ರತಿಭಟನಾಕಾರರಿಗೆ ತಿಳಿಸಿದರು.
ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಟಿ., ಸಾಮಾಜಿಕ ಕಾರ್ಯಕರ್ತ ಸಾಬು ಉರುಂಬಿಲ್ ಶಿರಾಡಿ, ಮಾಜಿ ಗ್ರಾ.ಪಂ. ಸದಸ್ಯ ವರ್ಗೀಸ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಶಶಿ, ಗ್ರಾ.ಪಂ. ಸದಸ್ಯರಾದ ದಿನೇಶ್, ಡೈಸಿ ವರ್ಗೀಸ್, ಸಂದ್ಯಾ, ರೋಹಿ ಟಿ.ಎಂ., ಹರೀಶ್ ಗೌಡ ಒಡ್ಡೆತ್ತಡ್ಕ, ಬಿಜುಕುಮಾರ್, ಹರೀಶ್ ಸೇರಿದಂತೆ ಶಾಲಾ ಮಕ್ಕಳು, ಸಾರ್ವಜನಿಕರು, ಸಮಿತಿಯವರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.