Advertisement

ಸೇವೆ ಕಾಯಂಗೆ ಆಗ್ರಹಿಸಿ ಪೌರಕಾರ್ಮಿಕರ ಪ್ರತಿಭಟನೆ

05:37 PM Jul 03, 2022 | Shwetha M |

ವಿಜಯಪುರ: ತಮ್ಮ ಸೇವೆ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್‌ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪೌರಕಾರ್ಮಿಕರು ಜಿಲ್ಲಾ ಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಶನಿವಾರ ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಪ್ರತಿಭಟನಾ ರ್ಯಾಲಿ ನಡೆಸಿದ ಪೌರ ಕಾರ್ಮಿಕರು, ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾ ಧಿಕಾರಿಗಳ ಕಚೇರಿ ಆವರಣಕ್ಕೆ ತೆರಳಿ ಧರಣಿ ನಡೆಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಲಕ್ಷ್ಮಣ ಹಂದ್ರಾಳ ಮಾತನಾಡಿ, ಪೌರಕಾರ್ಮಿಕರು ಅತ್ಯಂತ ಗುಣಮಟ್ಟದಿಂದ ಕಡಿಮೆ ಸಂಬಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬದುಕು ಸಹ ಇನ್ನೂ ಹಸನಾಗಿಲ್ಲ. ಸಫಾಯಿ ಕರ್ಮಾಚಾರಿ, ಸ್ವೀಪರ್‌ ಸೇರಿದಂತೆ ಪೌರಕಾರ್ಮಿಕರಿಗೆ ಮಾಸಿಕ ಸುಮಾರು 14 ಸಾವಿರ ರೂ. ಅಲ್ಪ ವೇತನ ನೀಡಲಾಗುತ್ತಿದೆ. ಇದರಿಂದ ಮೂಲ ಅಗತ್ಯಗಳನ್ನು ಈಡೇರಿಸುವುದೇ ದುಸ್ತರವಾಗಿ ಪರಿಣಮಿಸಿದೆ ಎಂದರು.

ಉದ್ಯಾನವನ, ಸ್ಮಶಾನ, ಘನ ತ್ಯಾಜ್ಯ ಘಟಕ , ಯುಜಿಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು ನೀರು ಸರಬರಾಜು ನೌಕರರನ್ನು ಒಂದೇ ಬಾರಿಗೆ ಕಾಯಂಗೊಳಸಬೇಕು. ನೇರ ಪಾವತಿಯಡಿ 60 ವರ್ಷಗಳವರೆಗೂ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗುತ್ತಾರೆ. ಸೇವೆಯಲ್ಲಿರುವಾಗ ಮರಣ ಹೊಂದಿದಾಗ ಸೇವೆಗೆ ತಕ್ಕ ಸೌಲಭ್ಯ ಸಿಗದೇ ಅವರನ್ನು ಅವಲಂಬಿತರು ಬೀದಿಗೆ ಬೀಳುತ್ತಿದ್ದಾರೆ. ಸೇವೆ ಸಲ್ಲಿಸಿ ನಿವೃತ್ತಿಯಾದರೆ ಸ್ವಚ್ಛತಾ, ಪೌರಕಾರ್ಮಿಕರು ಯಾವ ನಿವೃತ್ತಿ ಸೌಕರ್ಯಗಳಿಲ್ಲದೆ ಬರಿಗೈಯಲ್ಲಿ ಹೋಗುತ್ತಿದ್ದಾರೆ ಎಂದು ಸಮಸ್ಯೆ ನಿವೇದಿಸಿದರು.

ರೈತ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಕಾರ್ಮಿಕರನ್ನು ಅಪಾರವಾಗಿ ಶೋಷಿಸುವ ಗುತ್ತಿಗೆ ಪದ್ಧತಿ ಸರ್ಕಾರವೇ ನಡೆಸುತ್ತಿರುವ ಗುಲಾಮಿ ಪದ್ಧತಿ. ಈ ಗುಲಾಮಿ ಪದ್ಧತಿ ರದ್ದುಪಡಿಸಿ ಎಲ್ಲ ಕಾರ್ಮಿಕರನ್ನು ಕಾಯಂ ಮಾಡಬೇಕು. ಪೌರಕಾರ್ಮಿಕರ ಮಕ್ಕಳು ಖಾಸಗಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣಕ್ಕಾಗಿ ಹಣಕಾಸಿನ ನೆರವು ನೀಡಲು ಸೂಕ್ತ ಆದೇಶ ಹೊರಡಿಸುವಂತೆ ಆಗ್ರಹಿಸಿದರು.

Advertisement

ಶಂಕರ ಚಲವಾದಿ, ಸಂಜು ಕಂಬಾಗಿ, ಸೋಮು ರಣದೇವಿ, ಅಲ್ಪಾ ಅತ್ತಾರ, ಮೋಹಸಿನ್‌, ದಯಾನಂದ ಅಲ್ಲಿಬಾದಿ, ಭಾಸ್ಕರ್‌ ಬೋರಗಿ, ರವಿ ಲೋಣಾರಿ, ಸುರೇಶ ಡಂಬಳ, ರಫೀಕ್‌ ಲಷ್ಕರಿ, ಸುಂದರಾಬಾಯಿ ವಾಘಮೋರೆ, ಶಾಂತಾಬಾಯಿ ವಾಘಮೋರೆ, ಮೀನಾಕ್ಷಿ ಪರಪ್ಪಗೋಳ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next