Advertisement

ಮುಂದುವರಿದ ಪೌರ ಕಾರ್ಮಿಕರ ಪ್ರತಿಭಟನೆ

11:50 AM Jul 15, 2018 | Team Udayavani |

ಬೆಳ್ತಂಗಡಿ : ಬೆಳ್ತಂಗಡಿ ಪ.ಪಂ.ನಲ್ಲಿ ಕಸ ವಿಲೇವಾರಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜು. 13 ರಿಂದ ಹಮ್ಮಿಕೊಂಡಿರುವ ಮುಷ್ಕರ 2ನೇ ದಿನವೂ ಮುಂದುವರಿದಿದ್ದು, ನಗರದ ಅಲ್ಲಲ್ಲಿ ಕಸ ರಾಶಿ ಬಿದ್ದು ದುರ್ನಾತ ಬೀರಲಾರಂಭಿಸಿದೆ. ಪ್ರತಿಭಟನೆ ನಡೆಸುತ್ತಿರುವ 12 ಮಂದಿ ಕಾರ್ಮಿಕರು ಶನಿವಾರ ಪ.ಪಂ. ಕಚೇರಿಯ ಮುಂಭಾಗದಲ್ಲಿ ಕೂತು ಪ್ರತಿಭಟನೆ ನಡೆಸಿದರು. ಆದರೆ 2ನೇ ಶನಿವಾರ ಪಂ.ಗೆ ರಜೆ ಇದ್ದ ಕಾರಣ ಅಧಿಕಾರಿಗಳು ಯಾರೂ ಬಂದಿಲ್ಲ. 

Advertisement

ಹೀಗಾಗಿ ನಗರದ ಕಸ ವಿಲೇವಾರಿಯಾಗದೆ ಸಮಸ್ಯೆ ಬಿಗಡಾಯಿಸಿದೆ. ಬೆಳ್ತಂಗಡಿಯ ಬಸ್‌ ನಿಲ್ದಾಣ, ಮೂರು ಮಾರ್ಗ ಬಳಿ, ಸಂತೆಕಟ್ಟೆ ಮಾರುಕಟ್ಟೆ ಹೀಗೆ ಎಲ್ಲ ಕಡೆ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದು ಕೊಂಡಿದೆ. ಮಳೆಗೆ ಕಸ ಕೊಳೆತು ದುರ್ನಾತ ಬೀರುತ್ತಿದೆ. ಕೆಲವೆಡೆ ಬೀದಿನಾಯಿಗಳು ಎಳೆದುಕೊಂಡು ಹೋಗುತ್ತಿರುವರಿಂದ ಎಲ್ಲ ಕಡೆ ಪಸರಿಸಿಕೊಂಡಿದೆ.

ಈಗಾಗಲೇ ವಿವಿಧ ಸಾಂಕ್ರಾಮಿಕ ರೋಗಗಳಿಂದ ಜನತೆ ನರಳುತ್ತಿದ್ದು, ಇದೀಗ ಕಸದ ರಾಶಿಯಿಂದ ಇನ್ನಷ್ಟು ಕಾಯಿಲೆ ಹರಡುವ ಭೀತಿ ಇದೆ. ಸಮಸ್ಯೆ ಇಷ್ಟು ಗಂಭೀರವಾಗಿದ್ದರೂ ಪಂಚಾಯತ್‌ ಅಧಿಕಾರಿಗಳು, ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿಲ್ಲ. ಪೌರ ಕಾರ್ಮಿಕರು ಜು.16ರಂದು ಪಂಚಾಯತ್‌ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ವಾರದೊಳಗೆ ಪರಿಹಾರ
ಪೌರ ಕಾರ್ಮಿಕರಿಗೆ ಹಿಂದೆ ಗುತ್ತಿಗೆದಾರರ ಮೂಲಕ ವೇತನ ಪಾವತಿಯಾಗುತ್ತಿದ್ದು, ಪ್ರಸ್ತುತ ಪಂಚಾಯತ್‌ ನೇರವಾಗಿ ವೇತನ ನೀಡುತ್ತಿದೆ. ಹೀಗಾಗಿ ಹಿಂದಿನ ಮೊತ್ತ ಮುಖ್ಯಾಧಿಕಾರಿಗಳ ಖಾತೆಗೆ ಜಮೆಯಾಗಿ ವಾರದೊಳಗೆ ಅವರ ಹಣ ಖಾತೆಗೆ ಬೀಳುತ್ತದೆ. ಈ ಕುರಿತು ಕಾರ್ಮಿಕರಿಗೆ ಮನವರಿಕೆ ಮಾಡಲಾಗಿದ್ದು, ಕೆಲಸಕ್ಕೆ ಬರುವಂತೆ ಮನವಿ ಮಾಡಿದ್ದೇನೆ. ಊರಲ್ಲಿ ಇಲ್ಲದ ಕಾರಣ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಪಂಚಾಯತ್‌ ಅಧ್ಯಕ್ಷ ಮುಗುಳಿ ನಾರಾಯಣ ರಾವ್‌ ತಿಳಿಸಿದ್ದಾರೆ.

ಶಾಸಕರ ಭೇಟಿ
ಪೌರ ಕಾರ್ಮಿಕರು ಕಸ ವಿಲೇವಾರಿ ನಡೆಸದೆ ಪ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಶನಿವಾರ ಸ್ಥಳಕ್ಕೆ
ಶಾಸಕ ಹರೀಶ್‌ ಪೂಂಜ, ತಹಶೀಲ್ದಾರ್‌ ಮದನ್‌ ಮೋಹನ್‌ ಭೇಟಿ ನೀಡಿದ್ದಾರೆ. ಈ ಸಂದರ್ಭ ಶಾಸಕರು
ಕಾರ್ಮಿಕರಿಂದ ಮನವಿ ಸ್ವೀಕರಿಸಿ, ಮುಷ್ಕರದ ಕುರಿತು ಡಿಸಿ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next