Advertisement

ಸವದತ್ತಿ: ಸಮರ್ಪಕ ವೇತನ ಪಾವತಿಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ

08:50 PM Feb 15, 2023 | Team Udayavani |

ಸವದತ್ತಿ: ಇಲ್ಲಿನ ಹುಬ್ಬಳಿ-ಧಾರವಾಡ ನಗರಗಳಿಗೆ ನೀರು ಸರಬರಾಜು ಮಾಡುವ ಜಾಕ್ವೆಲ್ ಬಳಿ ಸಮರ್ಪಕ ವೇತನ ಪಾವತಿಗೆ ಆಗ್ರಹಿಸಿ ಧಾರವಾಡದ ಜಲಮಂಡಳಿಯ ದಿನಗೂಲಿ ಕಾರ್ಮಿಕ ಹಾಗೂ ವಿವಿಧ ಸಂಘಟನೆಗಳಿಂದ ಧರಣಿ ನಡೆಸಿ ಮುತ್ತಿಗೆ ಹಾಕಲಾಯಿತು.

Advertisement

ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ಹುಬ್ಬಳ್ಳಿ-ಧಾರವಾಡ ನೀರು ವಿತರಣೆಯಲ್ಲಿ ಶ್ರಮಿಸುತ್ತಿದ್ದ 358 ಸಿಬ್ಬಂದಿಗಳಿಗೆ 7 ತಿಂಗಳ ವೇತನ ಪಾವತಿಸಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಗೋಪಾಲಕೃಷ್ಣ, ಮೇಯರ ವೀರೇಶ ಅಂಚಟಗೇರಿ ಅವರು ಆದೇಶ ನೀಡದೇ ಸೇವೆಯಿಂದ ವಜಾಗೊಳಿಸಿದ್ದಾರೆ. ಮರು ನೇಮಕ ಮಾಡಿಕೊಳ್ಳದೇ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದ್ದು ಅದನ್ನು ತೀವ್ರವಾಗಿ ಖಂಡಿಸುತ್ತೇವೆ. 12 ಸಾವಿರ ರೂ. ದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾದರೂ ಸೇವೆ ಸಲ್ಲಿಸಿದವರನ್ನು ಹಠಾತ್ತನೆ ವಜಾಗೊಳಿಸಿದ್ದಾರೆ. ಇದರಿಂದ ದಿನಗೂಲಿ ನೌಕಕರ ಬದುಕು ಬೀದಿಗೆ ಬಂದಿದೆ ಎಂದು ಆಕ್ರೋಶಿಸಿದರು.

ಧಾರವಾಡ ಜಿಲ್ಲೆಯ ಮುಖಂಡರು, ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಮರುನೇಮಕ ಹಾಗೂ ಸಂಬಳ ಪಾವತಿಗೆ ಜ. 16 ಕ್ಕೆ ಗಡುವು ನೀಡಲಾಗಿತ್ತು ಜೊತೆಗೆ ಪಾಲಿಕೆಗೂ ಸೂಚಿಸಲಾಗಿತ್ತು. ತಿಂಗಳು ಕಳೆದರೂ ಜಾರಿಗೆ ಬರದ ಹಿನ್ನಲೆಯಲ್ಲಿ ಪಾಲಿಕೆ ಎದರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿಯೂ ಆಗಿದೆ. ಸರಕಾರ ಮತ್ತು ಸಚಿವರು ಇದನ್ನೆಲ್ಲ ಲೆಕ್ಕಿಸದೇ ಅಸಡ್ಡೆ ಭಾವ ತಳೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಸದವತ್ತಿಯ ಜಾಕ್ವೆಲ್‍ನಲ್ಲ ನೀರು ಸರಬರಾಜು ಸ್ಥಗಿತಗೊಳಿಸಲು ಮುಂದಾಗಿದ್ದೇವೆಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸರೋಜಾ ಲಿಂಬೆಕ್ಕನವರ ಮಾತನಾಡಿ, ವೇತನ ಪಾವತಿಸಿಲ್ಲ. ಉಪವಾಸ ಸತ್ಯಾಗ್ರಹ ನಡೆಸಿದ ಸಿಬ್ಬಂದಿಗಳು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿದ್ದರೂ ಅಲ್ಲಿಯೇ ಅಧಿಕಾರಿಗಳು ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದು, ಅಮಾನವೀಯ ಘಟನೆ. ಅಧಿಕಾರಿಗಳ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ವಜಾ ಆದೇಶವನ್ನು ಹಿಂಪಡೆದು, ಶೀಘ್ರವಾಗಿ ಪೂರ್ಣ ವೇತನ ಪಾವತಿಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ಕುಂದಾಪುರ: ಆ್ಯಂಬುಲೆನ್ಸ್‌ – ಲಾರಿ ನಡುವೆ ಅಪಘಾತ…  ಮೂವರಿಗೆ ಗಾಯ

Advertisement

ಕಾಂಗ್ರೆಸ್ ಮುಖಂಡ ಸೌರಭ ಚೋಪ್ರಾ ಮಾತನಾಡಿ, ಗಾಂಧೀಜಿ ಅಹಿಂಸಾ ತತ್ವಾಧಾರಿತ ಮತ್ತು ಶಾಂತಿಯಿಂದ ಪ್ರತಿಭಟಿಸಲಾಗುತ್ತಿದೆ. ಅಧಿಕಾರಿಗಳು ಮತ್ತು ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ನೇತಾಜೀ ಅವರ ಕ್ರಾಂತಿ ಮಂತ್ರ ಪಠಿಸಬೇಕಾದೀತು ಎಂದು ಎಚ್ಚರಿಸಿದರು.

ಮುಂಜಾನೆಯಿಂದ ಶಾಂತಿಯುತವಾಗಿ ನಡೆದ ಪ್ರತಿಭಟನೆ ಮಧ್ಯಾಹ್ನದ ವೇಳೆ ಉಗ್ರ ರೂಪ ತಾಳಿತು. ಧರಣಿನಿರತ ಕಾರ್ಮಿಕರು ಹಾಗೂ ಮುಖಂಡರು ಜಾಕ್‍ವೆಲ್ ಸ್ಥಗಿತಗೊಳಿಸಲು ನೂಕುನುಗ್ಗಲು ನಡೆದಾಗ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಲಘು ಲಾಠಿ ಪ್ರಾಹಾರ ನಡೆಸಿದರು. ಡಿವೈಎಸ್‍ಪಿ ರಾಮನಗೌಡ ಹಟ್ಟಿ, ಪಿಐ ಕರಣೇಶಗೌಡ ಜೆ. ಹಾಗೂ ಪೊಲೀಸ್ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮ ವಹಿಸಿದರು.

ಈ ವೇಳೆ ಉಪಾಧ್ಯಕ್ಷ ಈರಣ್ಣ ಕಿರಣಗಿ, ಎಲ್.ಎಸ್. ನಾಯಕ, ಶ್ರೀಕಾಂತ ಹಟ್ಟಿಹೊಳಿ, ಉಮೇಶ ಬಾಳಿ, ಸವದತ್ತಿ, ಹಾರೋಬೆಳವಡಿ, ಧಾರವಾಡ, ಅಮ್ಮಿನಭಾವಿ, ಹುಬ್ಬಳ್ಳಿ ದಿನಗೂಲಿ ನೌಕರರು ಹಾಗೂ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next