ಮದ್ದೂರು: ಪಂಚಾಯತ್ ರಾಜ್ ಕಾಯ್ದೆಯಡಿ ಹಾಗೂ ಸರ್ಕಾರಿ ಸುತ್ತೋಲೆಯಂತೆ ತಾಪಂ ಅಧಿಕಾರಿಗಳು ಕರ್ತವ್ಯ ನಿರ್ವಹಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕ್ರಮ ಖಂಡಿಸಿ ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು, ನೂರಾರು ಸಂಖ್ಯೆಯ ಗ್ರಾಪಂ ಸದಸ್ಯರು, ನರೇಗಾ ಕೂಲಿ ಕಾರ್ಮಿಕರು ಸರ್ಕಾರ ಹಾಗೂ ಜಿಪಂ, ತಾಪಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಕಚೇರಿ ಬಳಿ ಆರಂಭಗೊಂಡ ಪ್ರತಿಭಟನೆಯನ್ನು ಸಂಜೆ 6 ಗಂಟೆವರೆಗೂ ನಡೆಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಪಟ್ಟು: ಮಾತುಕತೆಗೆ ಆಗಮಿಸಿದ ಜಿಪಂ ಕಾರ್ಯ ದರ್ಶಿ ಸಂಜೀವಯ್ಯ, ತಾಪಂ ಇಒ ಸಂದೀಪ್ ಇನ್ನಿತರೆ ಅಧಿಕಾರಿಗಳನ್ನು ಕಚೇರಿಯಿಂದ ಹೊರ ತೆರಳದಂತೆ ತಾಕೀತು ಮಾಡಿದರಲ್ಲದೇ ಘಟನಾ ಸ್ಥಳಕ್ಕೆ ಪಂಚಾಯತ್ ರಾಜ್ ಇಲಾಖೆ ರಾಜ್ಯಮಟ್ಟದ ಅಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು.
Related Articles
ದುರುಪಯೋಗ: ತಾಪಂ ಇಒ ಸೇರಿದಂತೆ ಗ್ರಾಪಂ ಪಿಡಿಒಗಳು ಗ್ರಾಮಗಳಲ್ಲಿ ಸಮರ್ಪಕವಾದ ಕರ್ತ ವ್ಯ ನಿರ್ವಹಿಸುತ್ತಿಲ್ಲ. ಕೆಲ ಕಾಯ್ದೆಗಳನ್ನು ಗಾಳಿಗೆ ತೂರಿರುವ ಪರಿಣಾಮವಾಗಿ ಗ್ರಾಪಂ ಆಡಳಿತದ ಮೇಲೆ ದುಷ್ಪರಿಣಾಮ ಉಂಟಾಗಿದ್ದು ಅಭಿವೃದ್ಧಿಗೆ ಹಿನ್ನೆಡೆ ಉಂಟಾಗುವ ಜತೆಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಇಕ್ಕಟ್ಟಿಗೆ ಸಿಲುಕಿ ಸಾರ್ವಜನಿಕರ ಹಾಗೂ ಮತದಾರರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಕೆಲ ಪಿಡಿಒಗಳು ಗ್ರಾಪಂ ಕಚೇರಿಗೆ ತೆರಳದೆ ಕೇವಲ ಕಾಟಾಚಾರಕ್ಕಷ್ಟೇ ಬಂದು ಹೋಗುವ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ. ಗ್ರಾಪಂ ಸದಸ್ಯರ ಹಲವು ಬೇಡಿಕೆ ಈಡೇರಿಸುವಂತೆ ಕಳೆದ ಎರಡು ತಿಂಗಳ ಹಿಂದೆ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದ್ದರೂ ಕ್ರಮವಾಗಿಲ್ಲ ಎಂದು ದೂರಿದರು.
ಅಮಾನತುಗೊಳಿಸಿ: ತಾಪಂ ವ್ಯವಸ್ಥಾಪಕರನ್ನು ಮುಂದಿಟ್ಟುಕೊಂಡು ಇಒ ಅವರು ಹಣ ಪಡೆಯುತ್ತಿ ರುವ ಬಗ್ಗೆ ಅನುಮಾನ ಬರುತ್ತಿದೆ. ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಪಿಡಿಒಗಳೂ ಸೇರಿದಂತೆ ಹಣಕ್ಕೆ ಬೇಡಿಕೆ ಇಡುತ್ತಿರುವ ಅಧಿಕಾರಿ ಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.
ತಾಪಂ ಕಚೇರಿ ಆವರಣದಲ್ಲಿ ಸತತ 6 ಗಂಟೆ ಪ್ರತಿಭಟನೆ ನಡೆಸುತ್ತಿದ್ದರೂ ಮಾತುಕತೆಗೆ ಮುಂದಾಗದ ಜಿಪಂ ಸಿಇಒ ಕ್ರಮಖಂಡಿಸಿ ರಸ್ತೆ ತಡೆ ನಡೆಸಲು ಮುಂದಾದ ವೇಳೆ ಮುಖ್ಯದ್ವಾರಕ್ಕೆ ಹಾನಿ ಉಂಟಾಯಿತಲ್ಲದೇ ಸ್ಥಳದಲ್ಲಿದ್ದ ಪೊಲೀಸರ ಮಧ್ಯ ಪ್ರವೇಶದಿಂದ ಪ್ರತಿಭಟನಾಕಾರರನ್ನು ಸಮಾಧಾನಪ ಡಿಸಲಾಯಿತು.
ಜಿಪಂ ಸಿಇಒ ಶಾಂತಾ ಹುಲ್ಮನಿ ಪ್ರತಿಭಟನಾ ಸ್ಥಳಕ್ಕಾಗಮಿಸಿ ಮಾತನಾಡಿ, ಗ್ರಾಪಂ ಸದಸ್ಯರ ಬೇಡಿಕೆ ಈಡೇರಿಕೆಗೆ ಮೇಲಧಿಕಾರಿಗಳಿಗೆ ಪತ್ರ ವ್ಯವಹಾರ ಕೈಗೊಂಡಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಅಂತಹ ಅಧಿಕಾರಿಗಳನ್ನು ಅಮಾನತುಗೊಳಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಸಂಘಟನೆ ಗೌರವಾಧ್ಯಕ್ಷ ಎಸ್.ದಯಾನಂದ್, ಅಧ್ಯಕ್ಷ ಜಿ.ಎನ್. ಸತ್ಯ, ಪ್ರಧಾನ ಕಾರ್ಯದರ್ಶಿ ಎಂ.ಇ.ಕೃಷ್ಣ, ಪದಾಧಿಕಾರಿ ಗಳಾದ ಬಿ.ನಳಿನಿ, ಎಸ್.ಬಿ.ತಿಮ್ಮೇಗೌಡ, ಎಂ. ಮಹೇಶ್, ಶಿವಲಿಂಗಯ್ಯ, ರಾಮಕೃಷ್ಣ, ವಿಜಯ್, ಮಂಜುನಾಥ್, ಮಾದೇಶ್, ಚಂದ್ರಶೇಖರ್ ಇದ್ದರು.