Advertisement

ದೌರ್ಜನ್ಯದ ವಿರುದ್ಧ ಹೂ ಸುರಿದು ಪ್ರತಿಭಟನೆ

04:35 PM Dec 05, 2017 | Team Udayavani |

ಬೆಂಗಳೂರು: ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ರೈತರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕು ಹಾಗೂ ಅಕ್ರಮವಾಗಿ ನಿರ್ಮಿಸಿರುವ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಹೂವು ಸುರಿದು ಸಾಂಕೇತಿಕವಾಗಿ ಪ್ರತಿಭಟಿಸಿದರು.

Advertisement

ಮಾರುಕಟ್ಟೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಳಿಗೆಗಳನ್ನು ಕೂಡಲೆ ತೆರವುಗೊಳಿಸಬೇಕು ಮತ್ತು ಪಾಲಿಕೆಯಿಂದ ನಿರ್ಮಿಸಿರುವ 101 ಮಳಿಗೆಗಳನ್ನು, ಪ್ರಸ್ತುತ ನೆಲದ ಮೇಲೆ ವ್ಯಾಪಾರ ಮಾಡುತ್ತಿರುವವರಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಬೆಂಗಳೂರು ಸಮೀಪದ ಜಿಲ್ಲೆಗಳ ರೈತರು ಕೆ.ಆರ್‌.ಮಾರುಕಟ್ಟೆಗೆ ಬಂದು ಹೂವು ಮಾರಾಟ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಕೆಲ ಗೂಂಡಾಗಳು ರೈತರು ವ್ಯಾಪಾರ ಮಾಡುವ ಜಾಗದಲ್ಲಿ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿದ್ದರೂ ಕ್ರಮ ಕೈಗೊಳ್ಳದ ಬಿಬಿಎಂಪಿ ಅಸ್ತಿತ್ವದಲ್ಲಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಆಡಳಿತ ವೈಫ‌ಲ್ಯದಿಂದ ಪಾಲಿಕೆ ಜಾಗದಲ್ಲಿ ಬೇರೆಯವರು ಕಟ್ಟಡ ನಿರ್ಮಿಸಿ ಲಾಭ ಮಾಡುತ್ತಿದ್ದಾರೆ. ಇದೆಲ್ಲ ತಿಳಿದಿದ್ದರೂ ಪಾಲಿಕೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದ್ದು, ಕೆ.ಆರ್‌.ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮಳಿಗೆಗಳನ್ನು ತೆರವುಗೊಳಿಸಬೇಕು. ಜತೆಗೆ ಮಾರುಕಟ್ಟೆಯಲ್ಲಿ ಬೆಂಕಿ ದುರಂತಗಳಾದಾಗ ರಕ್ಷಣಾ ಕಾರ್ಯ ಅಗ್ನಿಶಾಮಕ ವಾಹನಗಳು ಬರಲು ರಸ್ತೆ ನಿರ್ಮಿಸಬೇಕು.

ಶೌಚಾಲಯ, ಕುಡಿಯುವ ನೀರು ಘಟಕಗಳನ್ನು ನಿರ್ಮಿಸಬೇಕು, ಮಾರುಕಟ್ಟೆಯ ನಾಲ್ಕು ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲೇ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಮತ್ತು ರೈತರು, ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

Advertisement

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಮಳಿಗೆಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶೌಚಾಲಯ, ಕುಡಿಯುವ ನೀರಿನ ಘಟಕ, ಸಿಸಿಟಿವಿ ಕ್ಯಾಮೆರಾ ಸೇರಿ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಇದರೊಂದಿಗೆ ನೆಲದ ಮೇಲೆ ವ್ಯಾಪಾರ ಮಾಡುವವರಿಂದ ಅರ್ಜಿ ಸ್ವೀಕರಿಸಿ, ಪಾಲಿಕೆ ನಿರ್ಮಿಸಿರುವ 101 ಮಳಿಗೆಗಳನ್ನು ಅವರಿಗೇ ಹಂಚಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next