ಸಾಗರ: ತ್ಯಾಗರ್ತಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯವರನ್ನು ಬೇರೆ ಕಡೆ ವರ್ಗಾಯಿಸುತ್ತೇವೆ ಎಂದು ಭರವಸೆ ನೀಡಿ, ಮಾತು ತಪ್ಪಿದ ತಾಲೂಕು ಪಂಚಾಯ್ತಿ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಬುಧವಾರ ರೈತ ಸಂಘದ ಡಾ. ಎಚ್.ಗಣಪತಿಯಪ್ಪ ಬಣದ ವತಿಯಿಂದ ತಾಲೂಕು ಕಚೇರಿ ಎದುರು ತಮಟೆ ಬಡಿದು, ಅಡುಗೆ ಮಾಡಿ ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತಸಂಘದ ತಾಲೂಕು ಅಧ್ಯಕ್ಷ ದಿನೇಶ್ ಶಿರವಾಳ, ತ್ಯಾಗರ್ತಿ ಗ್ರಾಪಂ ಪಿಡಿಓ ಅವರ ಸ್ವಜನ ಪಕ್ಷಪಾತ, ಸಾಕ್ಷಿನಾಶ, ಹಲ್ಲೆ ಇನ್ನಿತರ ಕೃತ್ಯ ಖಂಡಿಸಿ ದಾಖಲೆ ಸಹಿತವಾಗಿ ಕಳೆದ ಮಾರ್ಚ್ 24ರಂದು ತಾಲೂಕು ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್ ಏಪ್ರಿಲ್ 1ರಂದು ಪಿಡಿಓ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡುವ ಭರವಸೆ ನೀಡಿದ್ದರು. ಭರವಸೆ ಹಿನ್ನೆಲೆಯಲ್ಲಿ ರೈತ ಸಂಘ ಅಹೋರಾತ್ರಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿತ್ತು. ಆದರೆ ಈತನಕ ಪಿಡಿಓ ಅವರನ್ನು ವರ್ಗಾವಣೆ ಮಾಡುವತ್ತ ಅಧಿಕಾರಿಗಳು ಗಮನ ಹರಿಸದೆ ವಚನಭ್ರಷ್ಟರಾಗಿದ್ದಾರೆ. ರೈತ ಸಂಘವನ್ನು ಮತ್ತು ಸಾರ್ವಜನಿಕರನ್ನು ಅಧಿಕಾರಿಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ:ಸಾಗರ: ಅಂತರ್ ಜಿಲ್ಲಾ ಬೈಕ್ ಕಳ್ಳರು ಪೊಲೀಸರ ಬಲೆಗೆ; 30.50 ಲಕ್ಷ ರೂ.ಮೌಲ್ಯದ 22 ಬೈಕ್ ವಶ
ತಾಪಂ ಇಓ ಪ್ರತಿ ಪಿಡಿಓನಿಂದ ಪ್ರತಿತಿಂಗಳು 15 ಸಾವಿರ ರೂ. ಮಾಮೂಲಿ ಪಡೆಯುತ್ತಿದ್ದಾರೆ. ತ್ಯಾಗರ್ತಿ ವ್ಯಾಪ್ತಿಯಲ್ಲಿ ಬೃಹತ್ ಲೇಔಟ್ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಅಧಿಕಾರಿಗಳಿಗೆ ಪಿಡಿಓ ಅವರನ್ನು ವರ್ಗಾವಣೆ ಮಾಡಲು ಮನಸ್ಸಿದ್ದಂತೆ ಕಾಣುತ್ತಿಲ್ಲ. ತಾಲೂಕಿನ ಅಧಿಕಾರಿಗಳ ಭ್ರಷ್ಟಾಚಾರ ಮಿತಿಮೀರಿದೆ. ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಸಹ ಕಮಿಷನ್ ಪಡೆಯುತ್ತಾರೆ ಎನ್ನುವ ದೂರುಗಳಿವೆ. ಶಾಸಕರು ಅಧಿಕಾರಿಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ವಿಫಲವಾಗಿದ್ದು, ವಿರೋಧ ಪಕ್ಷ ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ರೈತರ ಸಮಸ್ಯೆ ಸಂಬಂಧ ಪ್ರತಿಭಟನೆ ಮಾಡುತ್ತಿಲ್ಲ. ರೈತ ಸಂಘ ಪಿಡಿಓ ಅವರನ್ನು ವರ್ಗಾವಣೆ ಮಾಡುವ ತನಕ ತನ್ನ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೊಯ್ಸಳ ಗಣಪತಿಯಪ್ಪ, ದೇವರಾಜ್, ರವಿ ಬೆಳಂದೂರು, ಭದ್ರೇಶ್ ಬಾಳಗೋಡು, ನಿತ್ಯಾನಂದ, ಕನ್ನಪ್ಪ, ಚಂದ್ರು, ಮಹೇಂದ್ರ, ಕಿರಣ್, ಟಿ.ವಿ.ಮಲ್ಲೇಶಪ್ಪ ಇನ್ನಿತರರು ಹಾಜರಿದ್ದರು.