Advertisement

ರಾಜ್ಯ ಸರ್ಕಾರದ ವಿರುದ್ಧ  ಸಿಡಿದೇಳಿ: ಬಿಎಸ್‌ವೈ

10:22 AM Mar 04, 2019 | |

ಮೈಸೂರು: ಸರ್ಕಾರಿ ಹುದ್ದೆಗಳ ನೇಮಕಾತಿ, ನೌಕರರ ವರ್ಗಾವಣೆ, ಬಡ್ತಿ ವಿಚಾರದಲ್ಲಿ ವೀರಶೈವ ನೌಕರರನ್ನು ಮೂಲೆಗುಂಪು ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸಮಾಜ ಸಿಡಿದೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದರು. ನಗರದ ಕಲಾಮಂದಿರದಲ್ಲಿ ಭಾನುವಾರಏರ್ಪಡಿಸಿದ್ದ ಕರ್ನಾಟಕ ರಾಜ್ಯವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 10ನೇ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬೀದಿಗಿಳಿದು ಹೋರಾಡಿ: ವರ್ಗಾವಣೆ, ಬಡ್ತಿ ನೀಡಿಕೆ ಸಂದರ್ಭದಲ್ಲಿ ಸರ್ಕಾರ ವೀರಶೈವ ನೌಕರರನ್ನು ಮೂಲೆಗುಂಪು ಮಾಡುತ್ತಿರುವುದು ಪ್ರತಿಯೊಂದು ಸಂದರ್ಭದಲ್ಲಿ ಗಮನಕ್ಕೆ ಬರುತ್ತಿದೆ. ವೀರಶೈವ ನೌಕರರಿಗೆ ಶಕ್ತಿ, ಯೋಗ್ಯತೆ ಇದ್ದರೂ ಕೆಲಸಕ್ಕೆ ಬಾರದ ಸ್ಥಳಗಳಲ್ಲಿ ಕೂರಿಸಿ ಸಮಾಜಕ್ಕೆ ಅನ್ಯಾಯ, ದ್ರೋಹ ಮಾಡಲಾಗುತ್ತಿದ್ದು, ಇದನ್ನು ಸರಿಪಡಿಸಬೇಕಿದೆ.

ಈಗಿರುವ ಈ ಕಿವಡು ಸರ್ಕಾರಕ್ಕೆ ಇದು ಅರ್ಥವಾಗಲ್ಲ. ಅನ್ಯಾಯವಾದಾಗ ವೀರಶೈವ ನೌಕರರು ಬೀದಿಗಿಳಿದು ಹೋರಾಡಿ, ಬಿಸಿಮುಟ್ಟಿಸಿದಾಗ ಈ ಸರ್ಕಾರ ಎಚ್ಚರಿಕೆ ವಹಿಸಬಹುದು. ವೀರಶೈವರು ಮಾತ್ರವಲ್ಲ, ಎಲ್ಲಾ ವರ್ಗದ ಜನರಿಗೂ ನ್ಯಾಯ ಸಿಗಬೇಕು. ಆದರೆ, ಈ ಸರ್ಕಾರ ನಮ್ಮನ್ನು ವೀರಶೈವರಾಗಿ ಹುಟ್ಟಿದ್ದೇ ಅಪರಾಧ ಎಂಬಂತೆ ಮೂಲೆಗುಂಪು ಮಾಡುತ್ತಿದೆ. ಇದನ್ನು ಬಹಳ ದಿನ ಸಹಿಸಿಕೊಳ್ಳಲು ಆಗುವುದಿಲ್ಲ. ಸಮಾಜದ ಯುವಕರು ಸಿಡಿದೇಳಬೇಕು. ಬೀದಿಗಿಳಿದು ಹೋರಾಟ ಮಾಡಬೇಕು. ನಿಮ್ಮ ಜೊತೆ ನಾನಿರುತ್ತೇನೆ ಎಂದು ಅವರು ಭರವಸೆ ನೀಡಿದರು. ನೌಕರರು ಅಂದ್ರೆ ಸಂವಿಧಾನದ ಕಾರ್ಯ ನಿರ್ವಾಹಕ ಅಂಗ, ಶಾಸಕಾಂಗದಷ್ಟೇ ಜವಾಬ್ದಾರಿ ಇದೆ. ಯಾವುದೇ ರಾಜ್ಯ, ರಾಷ್ಟ್ರದ ಅಭಿವೃದ್ಧಿ ಸರ್ಕಾರಿ ನೌಕರರ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಸಮಾಜ ನೀಡಿದ ಈ ಹುದ್ದೆಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಚ್ಚಾಟ ಬಿಡಿ: ವೀರಶೈವ-ಲಿಂಗಾಯತ ಒಳಪಂಗಡ ಗಳ ಕಚ್ಚಾಟ ಬಿಡಿ ಎಂದ ಅವರು, ನಾವೆಲ್ಲರೂ ಒಂದಾಗಿ ಒಳಪಂಗಡಗಳಿಂದ ಹೊರ ಬಂದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.

ಹೋರಾಟ: ಕೇಂದ್ರ ಸರ್ಕಾರ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ದಿಂದ 5 ಲಕ್ಷಗಳಿಗೆ ಏರಿಕೆ ಮಾಡಿದ್ದರಿಂದ ಸರ್ಕಾರಿ ನೌಕರರಿಗೆ ಶಾಶ್ವತವಾಗಿ ಅನುಕೂಲವಾಗಿದೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ನೌಕರರು ಬೀದಿಗಿಳಿಯದಂತೆ ವೇತನ ಆಯೋಗದ ಶಿಫಾರಸನ್ನು ಯಥಾವತ್‌ ಜಾರಿ ಮಾಡಿದ್ದಾಗಿ ಹೇಳಿದ ಅವರು, ಆದರೆ, ಇಂದು ಅರ್ಥ ಮಾಡಿಕೊಳ್ಳುವ ಶಕ್ತಿ ಇರುವವರು ಆಳುವ ಕುರ್ಚಿಯಲ್ಲಿ ಕುಳಿತಿಲ್ಲ. ಹೀಗಾಗಿ ಹೋರಾಟ ಮಾಡಲೇ ಬೇಕಿದೆ. ನೌಕರರ ಸಂಘದ ಬೇಡಿಕೆಗಳ ಈಡೇರಿಕೆಗೆ ವಿರೋಧಪಕ್ಷದ ನಾಯಕನಾಗಿ ಪ್ರಾಮಾಣಿಕ ಹೋರಾಟ ನಡೆಸುತ್ತೇನೆ. ಎಲ್ಲಾ ವರ್ಗದವರನ್ನೂ ಪ್ರೀತಿಸಿ, ನಾವು ಒಗ್ಗಟ್ಟಾಗಿರೋಣ, ಯಾವುದೇ ಸಮಾಜವನ್ನೂ ನಾವು ದೂರವಿಟ್ಟಿಲ್ಲ. ನಮಗೆ ಅದುರಕ್ತಗತವಾಗಿ ಬಂದಿದೆ. ಸಂಘದ ಸಮಾಜದ ಎಲ್ಲಾ ವರ್ಗಗಳನ್ನೂ ಗುರುತಿಸಿ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಬಿಎಸ್‌ವೈ ಸಿಎಂ ಆಗಲಿ: ಶಾಸಕ ನಿರಂಜನ್‌ ಕುಮಾರ್‌ ಮಾತನಾಡಿ, ಬಿ.ಎಸ್‌.ಯಡಿಯೂರಪ್ಪ ಮತ್ತೂಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಬೇರೆ ಬೇರೆ ಪಕ್ಷದ ಶಾಸಕರು ಒಟ್ಟಾಗಿ ಕುಳಿತು  ಮಾತನಾಡುವಾಗಲು ಎಲ್ಲರ ಅಭಿಪ್ರಾಯವು ಇದೇ ಆಗಿರುತ್ತದೆ ಎಂದರು. ಮಾಜಿ ಶಾಸಕ ಅಶೋಕ್‌ ಖೇಣಿ ಮಾತನಾಡಿ, ನನ್ನದು ಕಾಂಗ್ರೆಸ್‌ ಪಕ್ಷ, ಆದರೂ ಬಿ.ಎಸ್‌. ಯಡಿಯೂರಪ್ಪ ಅವರು ಆದಷ್ಟು ಬೇಗ ಮುಖ್ಯ ಮಂತ್ರಿ ಆಗಲಿ ಎಂದು ಆಶಿಸುತ್ತೇನೆ ಎಂದರು. ಶಾಸನ ಸಭೆಯಲ್ಲಿ ದನಿ ಎತ್ತಿ: ಸಂಘದ ಗೌರವಾಧ್ಯಕ್ಷ ಶಿವಶಂಕರ್‌ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಕಳೆದ ಐದು ವರ್ಷಗಳಿಂದ ಮೂಲೆಗುಂಪು ಮಾಡಿ ಅನ್ಯಾಯ ಮಾಡಲಾಗುತ್ತಿದೆ. ಇದರ ಪರಿಣಾಮವೀರಶೈವ ನೌಕರರ ಸಂಖ್ಯೆ ಶೇ.5ಕ್ಕೆ ಇಳಿದಿದೆ. ಇದರ ವಿರುದ್ಧ ಸಮಾಜದವರು ಶಾಸನ ಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು. ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿದ್ದರು. ಶಾಸಕ ಎಲ್‌. ನಾಗೇಂದ್ರ, ಮಾಜಿಶಾಸಕರಾದ ತೋಂಟದಾರ್ಯ, ಎಚ್‌.ಸಿ. ಬಸವರಾಜು, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಪಾಲಿಕೆ ಸದಸ್ಯೆ ಸುನಂದಾ ಫಾಲನೇತ್ರ, ಜಿಪಂ ಸದಸ್ಯರಾದ ಸದಾನಂದ, ಗುರುಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next