Advertisement

ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ

03:09 PM Apr 26, 2022 | Team Udayavani |

ಪಾಂಡವಪುರ: ಗಣಿಗಾರಿಕೆಯಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಕನಗನಮರಡಿ ಗ್ರಾಮಸ್ಥರು ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಗ್ರಾಮದಿಂದ 12 ಕಿ.ಮೀ ಪಾದಯಾತ್ರೆ ಮೂಲಕ ತಾಲೂಕು ಕಚೇರಿ ತಲುಪಿದ ಪ್ರತಿಭಟನಾಕಾರರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗಣಿ ಮಾಲಿಕ ಅಶೋಕ್‌ ಪಾಟೀಲ್‌ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಭೂಮಿ ಬರಡಾಗಲಿದೆ: ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಎಚ್‌.ಎನ್‌.ರವೀಂದ್ರ ಮಾತನಾಡಿ, ಗಣಿಗಾರಿಕೆಗೆ ಅನುಮತಿ ನೀಡುವ ವಿಚಾರದಲ್ಲಿ ಅಧಿಕಾರಿಗಳಿಗೆ ಗಣಿಮಾಲಿಕನ ಮೇಲೆ ಪ್ರೀತಿ ಹೆಚ್ಚಿರುವಂತೆ ನಡೆದುಕೊಂಡಿದ್ದಾರೆ. ಗಣಿಗಾರಿಕೆಯಿಂದ ಇಲ್ಲಿನ ವಿಶ್ವೇಶ್ವರಯ್ಯ ಉಪ ನಾಲೆಗಳು, ಕುರಹಟ್ಟಿ ಅಕ್ವಡೆಕ್‌ (ಮೇಲ್ಗಾಲುವೆ), ಹುಲಿಕೆರೆ ಸುರಂಗ ಕಾಲುವೆ, ಸೇತುವೆ ಇತ್ಯಾದಿಗಳಿಗೆ ಅಪಾಯವಿರುವ ಕಾರಣ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಗಣಿಗಾರಿಕೆಯಿಂದ ಏನಾದರೂ ಅಪಾಯ ಸಂಭವಿಸಿದರೆ 1.75 ಲಕ್ಷ ಎಕರೆ ಪ್ರದೇಶದ ಭೂಮಿ ಬರಡಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ಮೀರಿದ್ದಾರೆ: ಅರಣ್ಯ ಇಲಾಖೆ ಮುಖ್ಯಸ್ಥರು ಗಣಿಗಾರಿಕೆಯಿಂದ ಅರಣ್ಯದಲ್ಲಿನ ಚಿರತೆ, ಕೃಷ್ಣಾಮೃಗ ಸೇರಿದಂತೆ ಇತರೆ ವನ್ಯಜೀವಿ ಗಳಿಗೆ ಅಪಾಯವಿದೆ ಎಂದಿದ್ದಾರೆ. ಆದರೂ, ಎಲ್ಲವನ್ನೂ ಮೀರಿ ಅಧಿಕಾರಿಗಳು ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು.

ಪೊಲೀಸರ ನಿಯೋಜನೆ ಇಲ್ಲ: ಪಾದಯಾತ್ರೆ ಸಂದರ್ಭದಲ್ಲಿ ಟ್ರಾಫಿಕ್‌ ನಿಯಂತ್ರಿಸಲು ಪೊಲೀಸರನ್ನು ನಿಯೋಜನೆ ಮಾಡಿರಲಿಲ್ಲ. ಒಂದು ವೇಳೆ ಪ್ರತಿಭಟನಾಕಾರರು ಮತ್ತು ಸಾರ್ವಜನಿಕರ ನಡುವೆ ಗಲಾಟೆ ಸಂಭವಿಸಿದರೆ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿ ಪ್ರತಿಭಟನೆ ಹತ್ತಿಕ್ಕಬಹುದು ಎಂಬ ಉದ್ದೇಶ ದಿಂದಲೇ ಪೊಲೀಸರು ಈ ರೀತಿ ಮಾಡಿದ್ದಾರೆ ಎಂದು ದೂರಿದರು.

Advertisement

ಬಳಿಕ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಹಾಗೂ ತಹಶೀಲ್ದಾರ್‌ ಎಸ್‌.ಎಲ್‌. ನಯನಾ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ತಮ್ಮಣ್ಣ, ನಾಗರಾಜು, ಜಯರಾಮೇಗೌಡ, ಕೃಷ್ಣಮೂರ್ತಿ, ಬಸವರಾಜು, ರಾಜೇಶ್‌, ರಾಮಕೃಷ್ಣ, ಮಹ ದೇವು, ಕುಮಾರ ಮತ್ತಿತರರು ಉಪಸ್ಥಿತರಿದ್ದರು.

ಅಧಿಕಾರಿಗಳು ಪ್ರಾಯಶ್ಚಿತ್ತ ಪಡಬೇಕಾಗುತ್ತದೆ : ಅಧಿಕಾರ ವಿಕೇಂದ್ರಿಕರಣದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರವಿದೆ. ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ನಿರ್ಣಯ ಕೈಗೊಂಡಿದ್ದಾರೆ. ವಿದ್ಯುತ್‌ ಸಂಪರ್ಕ ಪಡೆಯಲು ಪಂಚಾಯ್ತಿಯಿಂದ ಎನ್‌ಒಸಿ ನೀಡಿಲ್ಲ. ಆದರೂ, ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದರಲ್ಲದೇ, ಪಾಪದ ಹಣ ಪಡೆದಿರುವ ಅಧಿಕಾರಿಗಳು ಇದಕ್ಕೆ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಕನಗನಮರಡಿ ಗ್ರಾಮಸ್ಥರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next