ಕೋಲಾರ: ಇಲ್ಲಿನ ಎಸ್‌ಎನ್‌ಆರ್ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ರೈತ ಸಂಘದಿಂದ ಜಿಲ್ಲಾ ಆಸ್ಪತ್ರೆ ಮುಂದೆ ಹೋರಾಟ ಮಾಡಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿಜಯಕುಮಾರ್ ರವರಿಗೆ ಮನವಿ ಸಲ್ಲಿಸಿದರು.
ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಆಸ್ಪತ್ರೆಗಳು ಚಿಕ್ಕ ಗಾಯಕ್ಕೆ 10 ಸಾವಿರ, ಬಡ ರೋಗಿಗಳ ಬಳಿ ಲಕ್ಷ ಲಕ್ಷ ಹಗಲು ದರೋಡೆ ಮಾಡಲು ಸರಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಎ. ನಳಿನಿ ಗೌಡ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು.
ತಾಲೂಕು ಅದ್ಯಕ್ಷ ಈ ಕಂಬಳ್ಳಿ ಮಂಜುನಾಥ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿನ ಕೆಲವು ಸಿಬ್ಬಂದಿಯ ಕೆಲಸ ದಲ್ಲಾಳಿಗಳನ್ನು ನೇಮಿಸಿಕೊಂಡು ಬಡವರನ್ನು ಹಿಂಸೆ ಮಾಡುವ ಕೆಲಸವಾಗಿದೆ. ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದ ವರೆಗೆ ಕುಡಿಯುವ ನೀರಿನಿಂದ ತಿನ್ನುವ ಅನ್ನದ ವರೆಗೆ ಲಂಚ ಹಾಗೂ ದಲ್ಲಾಳಿಗಳ ನೆರವಿಲ್ಲದೆ ಆಸ್ಪತ್ರೆಯ ಬಾಗಿಲಿಗೂ ಬಡ ರೋಗಿಗಳು ತಲುಪುವಂತಿಲ್ಲ. ಅಷ್ಟರ ಮಟ್ಟಿಗೆ ದಲ್ಲಾಳಿಗಳು ಬೆಳೆದು ನಿಂತಿದ್ದಾ ರೆಂದು ವೈದ್ಯರಿಗೆ ದೂರು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಕುಮಾರ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಹಾಗೂ ಸ್ವತ್ಛತೆ ಬಗ್ಗೆ ರೋಗಿಗಳ ದೂರುಗಳು ಹೆಚ್ಚಾಗಿವೆ. ಆಹಾರ ಔಷ ಧಿ ಕಾಳಸಂತೆ ಮಾರಾಟ ಮತ್ತು ದಲ್ಲಾಳಿಗಳ ಹಾವಳಿ ನಿಯಂತ್ರಣ ಮಾಡುವ ಜತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನ ಪರ ಆಸ್ಪತ್ರೆ ಮಾಡುವ ಭರವಸೆ ನೀಡಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಇತರರಿದ್ದರು.