Advertisement

ಆರ್‌ಎಸ್‌ಎಸ್‌-ಜೋಶಿ ವಿರುದ್ಧ ಪ್ರತಿಭಟನೆ

11:49 AM Apr 30, 2019 | Team Udayavani |

ಧಾರವಾಡ: ಸಂಸದ ಪ್ರಹ್ಲಾದ ಜೋಶಿ ಅವರು ವೀರಶೈವ ಮತ್ತು ಲಿಂಗಾಯತ ಧರ್ಮದಲ್ಲಿ ಬಿರುಕು ಮೂಡಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಖೀಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸೋಮವಾರ ಬೃಹತ್‌ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

Advertisement

ನಗರದ ಕಡಪಾ ಮೈದಾನದಿಂದ ಆರಂಭವಾದ ಪ್ರತಿಭಟನಾ ರ್ಯಾಲಿ ಬಸವೇಶ್ವರ ವೃತ್ತ, ಅಂಜುಮನ್‌ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡಿತು.

ರ್ಯಾಲಿಯುದ್ದಕ್ಕೂ ಪ್ರತಿಭಟನಾಕಾರರು ವೀರಶೈವ ಲಿಂಗಾಯತ ಧರ್ಮದಲ್ಲಿ ಒಡಕು ಮೂಡಿಸುತ್ತಿರುವ ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಹಾಗೂ ಆರ್‌ಎಸ್‌ಎಸ್‌ ಸಂಘಟನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಗರಗ ಗ್ರಾಮದ ಸಾಮಾನ್ಯ ಮಹಿಳೆಯೊಬ್ಬಳನ್ನು ಬಳಸಿಕೊಂಡು ಆ ಮೂಲಕ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಕುರಿತು ಇಲ್ಲಸಲ್ಲದ ಆಧಾರ ರಹಿತ ಆರೋಪ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಾತುಗಳನ್ನು ಹರಿಬಿಟ್ಟಿದ್ದಾರೆ. ಅಲ್ಲದೆ ಹೋರಾಟದ ಮುಂದಾಳತ್ವ ವಹಿಸಿದ್ದ ಪ್ರಮುಖ ನಾಯಕರಾದ ಗೃಹ ಸಚಿವ ಎಂ.ಬಿ. ಪಾಟೀಲ, ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಇನ್ನಿತರ ವೀರಶೈವ-ಲಿಂಗಾಯತ ಮುಖಂಡರಿಗೆ ಅವಮಾನಕಾರಿ ಮಾತುಗಳನ್ನಾಡಿ ಅವರನ್ನು ಹಾಗೂ ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದಾರೆ ಎಂದರು.

ಶೃತಿ ಅವರು ತಮ್ಮ ಮಾತಿನಲ್ಲಿ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಇಸ್ಲಾಮಿಕ್‌ ಹಾಗೂ ಕ್ರಿಶ್ಚಿಯನ್‌ ಸಂಘಟನೆಗಳಿಂದ ಹಣ ಪಡೆದಿದ್ದಾರೆ ಎಂದು, ಗಂಭೀರ ಆಧಾರ ರಹಿತ ಆರೋಪ ಮಾಡಿದ್ದಾರೆ. ಈ ಕುರಿತು ಈಗಾಗಲೇ ಗರಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

Advertisement

ಶೃತಿ ಬೆಳ್ಳಕ್ಕಿ ಮಾಡಿದ ಎಲ್ಲ ಆರೋಪಗಳ ಹಿಂದೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಂಘಟನೆ ಹಾಗೂ ಪ್ರಹ್ಲಾದ ಜೋಶಿ ಅವರ ಪ್ರಚೋದನೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಬೆಳ್ಳಕ್ಕಿ ಅವರ ಮಾತುಗಳಲ್ಲಿ ಆರ್‌ಎಸ್‌ಎಸ್‌ ಸಂಘಟನೆ ಕುರಿತು ಪದೇ ಪದೇ ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಶಿವಶಂಕರ ಹಂಪಣ್ಣವರ, ರಮೇಶ ತಳಗೇರಿ, ಅಜ್ಜಪ್ಪ ಗುಲಾಲದವರ, ಬಸವರಾಜ ಲೋಕೂರ, ಪ್ರದೀಪ ಪಾಟೀಲ, ನಿಂಗಣ್ಣ ಕರಿಕಟ್ಟಿ, ಸುರೇಶ ಯಲಿಗಾರ, ಮಲ್ಲನಗೌಡ ಪಾಟೀಲ, ಸಿದ್ದಪ್ಪ ಸಪೂರಿ, ಶ್ರೀಶೈಲ ಭಾವಿಕಟ್ಟಿ, ಶಂಭು ಸಾಲಿಮನಿ, ಪ್ರಕಾಶ ಬಾವಿಕಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next