ರಾಮದುರ್ಗ: ಡಾ| ಬಾಬಾಸಾಹೇಬ ಅಂಬೇಡ್ಕರ, ಪೆರಿಯಾರ್ ಮತ್ತು ಫುಲೆ ವಿಚಾರಗಳನ್ನು ಅನುಕರಣೆ ಮಾಡುವ ಅನುಯಾಯಿಗಳು ದೇಶದ್ರೋಹಿಗಳು ಮತ್ತು ಉಗ್ರಗಾಮಿಗಳು ಎಂಬ ಬಾಬಾ ರಾಮದೇವ್ ಅವರ ಹೇಳಿಕೆ ಖಂಡಿಸಿ ಅಹಿಂದ್ ಸಂಘಟನೆ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆ ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸ್ಥಳೀಯ ವೆಂಕಟೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನ ಸೌಧದ ಮುಂದಿನ ಮುಖ್ಯ ರಸ್ತೆಯಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಹೊರಟ ಅಹಿಂದ ಚಳವಳಿಗಾರರು ತುಳಿತಕ್ಕೆ ಒಳಗಾದವರ ಏಳಿಗೆಗೆ ಶ್ರಮಿಸಿ ಮಹಾತ್ಮರ ವಿರುದ್ಧ ಮತ್ತು ಅವರ ಅನುಯಾಯಿಗಳನ್ನು ನಿಂದಿಸಿ ಹೇಳಿಕೆ ನೀಡಿದ್ದಬಾಬಾ ರಾಮದೇವ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಂವಿಧಾನವನ್ನು ಡಾ| ಬಾಬಾಸಾಹೇಬ ಅಂಬೇಡ್ಕರ ಒಬ್ಬರೇ ರಚಿಸಿಲ್ಲ. ಅವರೊಬ್ಬ ಕರಡು ಸಮಿತಿ ಅಧ್ಯಕ್ಷರಾಗಿದ್ದರು ಎಂದು ಹೇಳಿಕೆ ನೀಡಿದ್ದ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ ಮತ್ತು ಅವರಿಗೆ ಬೆನ್ನೆಲುಬಾಗಿರುವ ಶಿಕ್ಷಣ ಸಚಿವ ಸುರೇಶಕುಮಾರ ವಿರುದ್ಧವೂ ಧಿಕ್ಕಾರ ಹಾಕಿದರು. ರಾಮದುರ್ಗ ಬಂದ್ ಕರೆಗೆ ಸ್ಪಂದಿಸಿದ ಸ್ಥಳೀಯ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಯಶಸ್ವಿಗೊಳಿಸಿದರು
. ಸಾರಿಗೆ ಸಂಚಾರಕ್ಕೆ ಮಾತ್ರ ಅಡ್ಡಿಯಾಗಲಿಲ್ಲ. ಪಟ್ಟಣದ ಗಾಂ ಧಿನಗರ ಮತ್ತು ಮಿನಿ ವಿಧಾನಸೌಧದ ಮುಂದಿನ ರಸ್ತೆಗಳಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಹೊತ್ತು ರಸ್ತೆ ಸಂಚಾರಕ್ಕೂ ಅಡೆತಡೆ ಮಾಡಿದರು. ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ದಲಿತ ನಾಯಕ ಬಿ.ಆರ್. ದೊಡಮನಿ, ಡಿ.ಎಲ್. ದೊಡಮನಿ, ಲಕ್ಷ್ಮೀ ನಾರಾಯಣ, ಪುರಸಭೆಯ ಮಾಜಿ ಅಧ್ಯಕ್ಷ ಸುರೇಶ ಪತ್ತೇಪೂರ, ಅಲ್ಪ ಸಂಖ್ಯಾತರ ಮುಖಂಡ ಮಹ್ಮದ್‌ಶ ಬೆಣ್ಣಿ, ಜಿ.ಪಂ ಸದಸ್ಯ ಜಹೂರ್ ಹಾಜಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿಜಯಕುಮಾರ ರಾಠೊಡ, ರೈತ ಸಂಘ ಮತ್ತು ಹಸಿರು ಸೇನೆ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ ಮಾತನಾಡಿದರು.
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ, ಯಲ್ಲಪ್ಪ ದೊಡಮನಿ, ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯ ಎಂ.ಕೆ. ಯಾದವಾಡ, ಮಹ್ಮದ ಬೇಗ ನಿಗದಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.