ಬಳ್ಳಾರಿ: ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿರುವ ಭಾರತೀಯ ರೈಲ್ವೆ ಇಲಾಖೆಯನ್ನು ಖಾಸಗೀಕಣಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರಕೈಬಿಡಬೇಕು ಎಂದು ಆಗ್ರಹಿಸಿ ನಗರದ ರೈಲು ನಿಲ್ದಾಣದ ಆವರಣದಲ್ಲಿ ಸೋಷಲಿಸ್ಟ್ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ-ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಭಾರತೀಯ ರೈಲ್ವೆ ಪ್ರಪಂಚದಲ್ಲಿಯೇ ಅತಿದೊಡ್ಡ ರೈಲ್ವೆ ಜಾಲವಾಗಿದೆ. ದೇಶದ ಆರ್ಥಿಕತೆಯ ಬಹುದೊಡ್ಡ ಜೀವನಾಡಿಯಾಗಿ ಕೆಲಸ ಮಾಡುತ್ತಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ಪ್ರತಿದಿನ ಸುಮಾರು ಎರಡೂವರೆ ಕೋಟಿಯಷ್ಟು ಜನರನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವ ಸರ್ಕಾರದ ಅಧಿಧೀನದ ಬಹು ದೊಡ್ಡ ಸಾರ್ವಜನಿಕ ಉದ್ಯಮ ರೈಲ್ವೆ ವಲಯವಾಗಿದೆ. ಜನಸಾಮಾನ್ಯರಿಗೆ ಸುಲಭ ದರದಲ್ಲಿ ಪ್ರಯಾಣ ಸೌಕರ್ಯ ಕಲ್ಪಿಸುವ ಈ “ಹೆಮ್ಮೆಯ ಬಹು ದೊಡ್ಡ ಉದ್ಯಮ’ವನ್ನು ಇದೀಗ ಕೇಂದ್ರ ಸರ್ಕಾರ ಖಾಸಗೀಕರಣ ನೀತಿಗಳಿಗೆ ಹೆಚ್ಚು ಆದ್ಯತೆ ನೀಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ 2014ರಲ್ಲಿ “ವಿವೇಕ್ ದೇವರಾಯ ಸಮಿತಿ’ಯನ್ನು ರಚಿಸಿ, ಇಡೀ ಇಲಾಖೆಯನ್ನು ತುಂಡು ತುಂಡಾಗಿಸಲು ಯೋಜನೆ ರೂಪಿಸಿಕೊಂಡಿತು. ರೈಲ್ವೆ ನಿರ್ಮಾಣ, ಕಾರ್ಯಾಚರಣೆಗಳು, ನಿರ್ವಹಣೆ, ರೈಲ್ವೆ ಕೋಚ್, ಮೀಸಲು ಮಾರ್ಗಗಳು, ಟ್ರೇನ್ ಸೆಟ್‌ಗಳು ಸೇರಿದಂತೆ ಭಾರತೀಯ ರೈಲ್ವೆ ಇಲಾಖೆ ನಿರ್ವಹಿಸುವ ಎಲ್ಲ ವಿಭಾಗಗಳನ್ನು ವಿಭಜಿಸಿ, ಖಾಸಗೀಕರಣಗೊಳಿಸುವ ನಿರ್ಧಾರ ಕೈಗೊಂಡಿತು. ಇದಕ್ಕೆ ಶೇ. 100ರಷ್ಟು ನೇರ ವಿದೇಶಿ ಬಂಡವಾಳ ಹೂಡಲು ಅನುಮತಿ ನೀಡಿತು. ಈ ನಿರ್ಧಾರದಿಂದ ರೈಲ್ವೆ ಸಾರಿಗೆಯನ್ನು ಆಶ್ರಯಿಸಿರುವ ದೇಶದ ಕೋಟ್ಯಂತರ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಬದಲಿಗೆ ದೊಡ್ಡ ದೊಡ್ಡಬಂಡವಾಳಗಾರರಿಗೆ ಹೆಚ್ಚಿನ ಲಾಭ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಒತ್ತಾಯಿಸಿದರು. ಬಳಿಕ ಬಳ್ಳಾರಿಯ ರೈಲ್ವೆ ವ್ಯವಸ್ಥಾಪಕ ಶೇಷಾದ್ರಿಯವರಿಗೆ ಮನವಿ ಸಲ್ಲಿಸುವ ಮೂಲಕ ಮೂಲಕ ಪ್ರಧಾನಮಂತ್ರಿಗೆ ಕಳುಹಿಸಿಕೊಟ್ಟರು.
ಪ್ರತಿಭಟನೆಯಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಆರ್.ಸೋಮೇಖರಗೌಡ,ಎ.ದೇವದಾಸ್, ಇ.ಹನುಮಂತಪ್ಪ, ಶರ್ಮಾಸ್,ಪಂಪಾಪತಿ, ಎಚ್. ಎರ್ರಿಸ್ವಾಮಿ, ಜಗದೀಶ್‌ನೇಮಕಲ್, ಜಿ. ಸುರೇಶ್, ಜೆ.ಪಿ. ರವಿಕಿರಣ್, ಡಾ|ಎನ್. ಪ್ರಮೋದ್ ಹಾಗೂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.