ಚಿತ್ರದುರ್ಗ: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವವಿದ್ಯುತ್ ಕಂಪನಿಗಳ ಖಾಸಗೀಕರಣವನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ, ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರ್‌ಗಳ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕೆಪಿಟಿಸಿಎಲ್ ಕಚೇರಿ ಆವರಣದಲ್ಲಿ ಸೇರಿದ ನೌಕರರು, ವಿದ್ಯುತ್ ಕ್ಷೇತ್ರವನ್ನುಯಾವ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಒಂದು ವೇಳೆ ಖಾಸಗಿಯವರಿಗೆ ವಹಿಸಿದಲ್ಲಿ ಇದು ಕಾರ್ಮಿಕ ವಿರೋಧಿ ನೀತಿಯಾಗುತ್ತದೆ. ಇದರಿಂದ ರೈತರು, ಸಾರ್ವಜನಿಕರು ಹಾಗೂ ಜನಸಾಮಾನ್ಯರಿಗೆ ಹೊರೆಯಾಗುತ್ತದೆ ಎಂದು ಎಚ್ಚರಿಸಿದರು.
ಸೋಮವಾರದಿಂದ ಉತ್ತರ ಪ್ರದೇಶದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರಾರಂಭಿಸಲಿರುವ ಮುಷ್ಕರಕ್ಕೆ ನೈತಿಕ ಬೆಂಬಲ ನೀಡುವುದಾಗಿ ನೌಕರರು ತಿಳಿಸಿದರು. ಸಂಘದ ಸಿಇಸಿ ಸದಸ್ಯ ಹಾಗೂ
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಪಿ. ಬಸವರಾಜು ಮಾತನಾಡಿ, ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಅವಕಾಶ ನೀಡಬಾರದು. ಈಗಾಗಲೇ ಕೆಇಬಿ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದು,ನಾಡಿನ ಜನಸಾಮಾನ್ಯರು, ರೈತರಿಗೆ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವೇಳೆ ಖಾಸಗೀಕರಣಗೊಂಡಲ್ಲಿ ರೈತರಿಗೆ ಅನ್ಯಾಯವಾಗುತ್ತದೆ. ಜನಸಾಮಾನ್ಯರಿಗೆ ವಿದ್ಯುತ್ ದುಬಾರಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಚಿದಾನಂದಪ್ಪ, ಲೆಕ್ಕಾಧಿಕಾರಿ ತಿಪ್ಪೇಶ್, ಎಇಇಗಳಾದ ರಮೇಶ್, ತಿಮ್ಮಣ್ಣ, ಬಾಲಕೃಷ್ಣ, ನಾಗೇಶ್, ವೀರೇಶ್, ಪ್ರಸನ್ನಕುಮಾರ್, ಮಹಮ್ಮದ್ ಮನ್ಸೂರ್ ಖಾನ್, ಶಿಲ್ಪಾ, ಗೀತಾಂಜಲಿ, ಶಾರದಮ್ಮ ಮತ್ತಿತರರು ಭಾಗವಹಿಸಿದ್ದರು.