ಕೆ.ಆರ್.ಪುರ: ಖಾಸಗಿ ಶಾಲೆ, ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲಿ ಮಾಡುವುದನ್ನು ತಡೆಯುವಂತೆ ಹಾಗೂ ಏಕರೂಪ ಶುಲ್ಕ ನೀತಿ ಜಾರಿಗೆ ಒತ್ತಾಯಿಸಿ ಶನಿವಾರ ಪ್ರತಿಭಟಿಸಿದ ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಕಾರ್ಯಕರ್ತರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಕ್ಷಿಣ ವಲಯ 4ರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ಬಿಬಿಎಂಪಿ ಕಚೇರಿಯಿಂದ ಬಿಇಒ ಕಚೇರಿವರೆಗೆ ಕಾಲ್ನಡಿಗೆ ಜಾಥ ನಡೆಸಿದ ಸೇನೆ ಕಾರ್ಯಕರ್ತರು, ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ಯತೀಶ್ ಗೌಡ, ಸೇವಾ ಮನೋಭಾವದ ಶಿಕ್ಷಣ ಕ್ಷೇತ್ರವನ್ನು ಖಾಸಗಿ ಸಂಸ್ಥೆಗಳು ಇಂದು ದೊಡ್ಡ ಉದ್ಯಮವನ್ನಾಗಿಸಿವೆ.
ಬಡ ಮತ್ತು ಮಧ್ಯಮ ವರ್ಗದ ಪ್ರತಿಬಾವಂತ ವಿದ್ಯಾರ್ಥಿಗಳು ಶುಲ್ಕ ಭರಿಸಲಾಗದೆ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ವಿದ್ಯಾರ್ಥಿಗಳಿಗೆ ಹಲವು ಶಾಲೆಗಳು ಪ್ರವೇಶ ನೀಡುತ್ತಿಲ್ಲ. ಜತೆಗೆ ಇಂಥ ಮಕ್ಕಳನ್ನು ದಾಖಲಿಸಿಕೊಂಡರೂ ಸಾಂಸ್ಕೃತಿಕ ಮತ್ತು ಕ್ರೀಡಾ ಶುಲ್ಕದ ಹೆಸರಿನಲ್ಲಿ ಪೋಷಕರಿಂದ ಲಕ್ಷಾಂತರ ರೂ. ಸುಲಿಗೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಶಿಕ್ಷಣ ಸಂಸ್ಥೆಗಳು ಕನ್ನಡ ಮಾದ್ಯಮಕ್ಕೆ ಅನುಮತಿ ಪಡೆದು, ಇಂಗ್ಲಿಷ್ ಮಾಧ್ಯಮ ಬೋಧಿಸುವ ಮೂಲಕ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿವೆ. ಈ ಅಕ್ರಮಗಳ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ನಿಯಮ ಉಲ್ಲಂ ಸುವ ಶಾಲೆಗಳ ಮಾನ್ಯತೆ ರದ್ದುಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಬಿಇಒ ಸಲೀಂ ಪಾಷ ಮನವಿ ಸ್ವೀಕರಿಸಿದರು. ಸೇನೆಯ ಜ್ಯೋತಿಕುಮಾರ್ ಆಚಾರಿ, ಎಂ.ವಿ.ಮಂಜುನಾಥ್, ರಾಮಾಚಾರಿ, ಕಾಂತಕುಮಾರ್, ಲಕ್ಷ್ಮೀಕಾಂತ್, ಗಜೇಂದ್ರ, ಟಿ.ಎಸ್.ಮೂರ್ತಿ ಹಾಗೂ ಇತರರು ಪಾಲ್ಗೊಂಡಿದ್ದರು.