Advertisement

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

12:08 PM Feb 23, 2021 | Team Udayavani |

ದೊಡ್ಡಬಳ್ಳಾಪುರ: ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್‌ನಿಂದ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ನೆಲದಾಂಜನೆಯ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಟಾಂಗಾ ಹಾಗೂ ಸೈಕಲ್‌ ಸವಾರಿ ಮಾಡಿದರೆ, ಕಾರ್ಯಕರ್ತರು ಕತ್ತೆಗಳ ಮೆರವಣಿಗೆ ಮಾಡಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಟಿ.ಎಸ್‌. ಶಿವರಾಜ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ದಿನೇ ದಿನೇ ಬೆಲೆ ಏರಿಕೆ: ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ಇಂದು ಪೆಟ್ರೋಲ್‌ ಡೀಸೆಲ್‌ ಮತ್ತು ಗ್ಯಾಸ್‌ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ದೇಶದ ರೈತರ ವಿರೋಧಿ ನೀತಿಗಳನ್ನು ಜಾರಿ ಮಾಡಿ, ಭಾರತದ ಇತಿಹಾಸದಲ್ಲೇ ಎಲ್ಲ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಪ್ರಪಂಚದ 192 ದೇಶಗಳಲ್ಲಿ ಇರದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ನಮ್ಮಲೇ  ಜಾಸ್ತಿ ಇರುವುದು ಭಾರತೀಯರಾದ ನಮಗೆ ಶೋಚನೀಯ.

ಸರ್ಕಾರಕ್ಕೆ ತಗಲುವ ಬೆಲೆ ಕೇವಲ 30 ರೂ. ಆದರೂ, ಜನರಿಗೆ 60 ರೂ. ತೆರಿಗೆ ವಿಧಿಸಿ 100 ರೂ. ಆಸು ಪಾಸಿನಲ್ಲಿ ವಿತರಿಸುತ್ತಿರುವ ಸರ್ಕಾರ ಎಲ್ಲರಿಗೂ ಹೊರೆಯಾಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಪ್ರಜಾಪ್ರಭುತ್ವ ಮರೆತು ಸರ್ವಾಧಿಕಾರ ಧೋರಣೆತೋರುತ್ತಿರುವ ಸರ್ಕಾರ ಇದಾಗಿದೆ. ದೇಶಕ್ಕೆ ಸಾಲವೆಂಬ ಹೊರೆ ಹೊರಿಸುವುದು ಬಿಟ್ಟರೆಯಾವುದೇ ಅಭಿವೃದ್ಧಿ ಪರ ಕಾರ್ಯ ಮಾಡುತ್ತಿಲ್ಲ. ಎಷ್ಟೋ ಕಾರ್ಖಾನೆಗಳು ಮುಚ್ಚಿ ಹೋಗಿ ನಿರುದ್ಯೋಗಿಗಳಾಗಿ ಜನತೆ ಪರದಾಡುತ್ತಿದ್ದಾರೆ ಎಂದರು.

Advertisement

ಎಲ್ಲರೂ ಒಂದಾಗಿ ಹೋರಾಡೋಣ: ವಿಧಾನ ಪರಿಷತ್‌ ಸದಸ್ಯ ರವಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕರಾಳ ಶಾಸನ ಹಾಗೂ ಜನವಿರೋಧಿ ಕಾರ್ಯಗಳನ್ನು ಉಗ್ರವಾಗಿ ಖಂಡಿಸಬೇಕಿದೆ. ಈ ಸರ್ಕಾರಗಳು ಜನರಮನದಲ್ಲಿ ಹತಾಶೆ ಭಾವನೆ ಮೂಡಿಸಿದೆ. ಬಿಜೆಪಿ ಸರ್ಕಾರ ಇಂದು ಬಡ ಕಾರ್ಮಿಕರ, ಕೂಲಿಕಾರ್ಮಿಕರ ಬಾಳನ್ನು ಹದಗೆಡಿಸಿದೆ. ಪ್ರತಿಭಟನೆಗೆ ಕಿಂಚಿತ್ತೂ ಬೆಲೆ ಕೊಡದೆ ತನ್ನದೇ ಆದ ನಿಲುವುಪ್ರದರ್ಶನ ಮಾಡುತ್ತಿರುವ ಸರ್ಕಾರದ ವಿರುದ್ಧಎಲ್ಲರೂ ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೈರೇಗೌಡ, ನಗರಘಟಕದ ಅಧ್ಯಕ್ಷ ಅಂಜನಮೂರ್ತಿ, ಕಸಬಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಪ್ಪಿವೆಂಕಟೇಶ್‌, ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್‌, ಜಿಪಂ ಸದಸ್ಯಚುಂಚೇಗೌಡ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್‌ ರೆಡ್ಡಿ,ಮುಖಂಡ ತಿ.ರಂಗರಾಜು, ಕೃಷ್ಣಮೂರ್ತಿ, ಕುಮುದಾ ಹಾಗೂ ಕಾರ್ಯಕರ್ತರು ಇದ್ದರು.

ಮೋದಿ ಸರ್ಕಾರವಲ್ಲ ಅಂಬಾನಿ, ಅದಾನಿ ಸರ್ಕಾರ :

ಅಡಿಗೆ ಅನಿಲದ ಬೆಲೆ ಸಬ್ಸಿಡಿ ಹೆಸರಿನಲ್ಲಿ ಪದೇ ಪದೇ ಹೆಚ್ಚಿಸುತ್ತಿದ್ದು, 400 ರೂ. ಇದ್ದ ಸಿಲಿಂಡರ್‌ ಬೆಲೆಯನ್ನು 800ರ ಗಡಿಗೆ ತಲುಪಿದೆ. ಈಗಿನ ಕಾಲಮಾನದಲ್ಲಿ ಪೆಟ್ರೋಲ್‌, ಡೀಸೆಲ್‌ ಮತ್ತು ಗ್ಯಾಸ್‌

ಎಲ್ಲ ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳಾಗಿವೆ. ಅಂಬಾನಿ, ಆಧಾನಿಯಂತಹ ವ್ಯಾಪಾರಿಗಳಿಗೆ ಸುಂಕ ವಿಧಿಸದೆ ಕೇವಲ ಬಡವರ ಮೇಲೆ ಮಾತ್ರ ವಿಧಿಸುತ್ತಾ ಬಡವರ ಮತ್ತು ಜನಸಾಮಾನ್ಯರ ರಕ್ತ ಹೀರಲಾಗುತ್ತಿದೆ. ಕೊರೊನಾದಿಂದ ಹಲವಾರು ಕಾರ್ಖಾನೆ ಮತ್ತು ವ್ಯವಹಾರಗಳು ನಷ್ಟ ವಾಗಿದ್ದರೂ, ಅಂಬಾನಿ, ಆಧಾನಿ ಮಾತ್ರ ಹಾಗೆ ಇದ್ದಾರೆಂದರೆ ಕಾರಣ ಕೇಂದ್ರ ಸರ್ಕಾರ. ಇದು ಮೋದಿ ಸರ್ಕಾರವಲ್ಲ ಅಂಬಾನಿ, ಅದಾನಿ ಸರ್ಕಾರ ಎಂದು ಶಾಸಕ ಕೃಷ್ಣಭೈರೇಗೌಡ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next