Advertisement

ಮುಕ್ತ ವಿಶ್ವವಿದ್ಯಾಲಯ  ಮುಚ್ಚದಂತೆ ಪ್ರತಿಭಟನೆ

07:15 AM Oct 14, 2017 | |

ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮುಚ್ಚದೆ ಅದರ ಮಾನ್ಯತೆ ನವೀಕರಿಸಬೇಕೆಂದು ಒತ್ತಾಯಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಮನವಿ ಸಲ್ಲಿಸಲು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಬಂದಿದ್ದ ವಿವಿ ನೌಕರರು, ವಿದ್ಯಾರ್ಥಿಗಳು ಅಲ್ಲೇ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.

Advertisement

ಮಾಜಿ ಸಚಿವ ಎಸ್‌.ಎ.ರಾಮದಾಸ್‌ ನೇತೃತ್ವದಲ್ಲಿ ಪ್ರಕಾಶ್‌ ಜಾವಡೇಕರ್‌ ಅವರಿಗೆ ಮನವಿ ಸಲ್ಲಿಸಲು ಬಂದಿದ್ದ ನೌಕರರು ಮತ್ತು ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಘೋಷಣೆ ಕೂಗಿ ಪ್ರತಿಭಟನೆ ಆರಂಭಿಸಿದರು. ಆದರೆ, ಇದಕ್ಕೆ ಬಿಜೆಪಿ ಕಚೇರಿಯಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಘೋಷಣೆ ಕೂಗುವುದನ್ನು ನಿಲ್ಲಿಸಿದರು.

ಅಷ್ಟರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ವಿಧಾನ ಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಸ್ಥಳಕ್ಕೆ ಧಾವಿಸಿದರು. ಅವರಿಗೆ ನೌಕರರು ಮತ್ತು ವಿದ್ಯಾರ್ಥಿಗಳ ಪರ ಮನವಿ ಸಲ್ಲಿಸಿದ ಮಾಜಿ ಸಚಿವ ರಾಮದಾಸ್‌, “ಮುಕ್ತ ವಿವಿ ಸಮಸ್ಯೆ ಇಂದು , ನಿನ್ನೆಯದಲ್ಲ. ಅಲ್ಲಿನ ಬೋಧಕರಿಗೆ ಇದುವರೆಗೂ ಯುಜಿಸಿ ಸ್ಕೇಲ… ನೀಡಿಲ್ಲ. ಇನ್ನುಮುಂದೆ ವಿವಿಗೆ ಮಾನ್ಯತೆ ಇಲ್ಲವೆಂದರೆ ಇದುವರೆಗೆ ಇಲ್ಲಿ ಪದವಿ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳ ಪರಿಸ್ಥಿತಿ ಏನು’ ಎಂದು ಪ್ರಶ್ನಿಸಿದರು.
ಇದ್ದಕ್ಕಿದ್ದಂತೆ ರಾಜ್ಯ ಸರ್ಕಾರ ಮುಕ್ತ ವಿವಿ ಮುಚ್ಚಲು ಮುಂದಾಗಿದೆ. ವಿವಿ ಮುಚ್ಚಲು ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದ ಅವರು, ಈ ಸಂಬಂಧ ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಲಾಗುವುದು. ಅಲ್ಲದೆ, ಕೇಂದ್ರ ಸಚಿವರಿಗೂ ಮನವಿ ಮಾಡಲಾಗುವುದು ಎಂದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಕೇಂದ್ರ ಸಚಿವ ಅನಂತಕುಮಾರ್‌, ಮುಕ್ತ ವಿವಿ ಮುಚ್ಚದಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಲ್ಲಿ ಮನವಿ ಮಾಡಲಾಗುವುದು. ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಮುಕ್ತ ವಿವಿ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ ತಪ್ಪು ಹೆಜ್ಜೆ ಇಟ್ಟಿದೆ. ಈ ವಿಚಾರದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರೊಂದಿಗೆ ಮಾತನಾಡಿ ವಿವಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.

Advertisement

ಮುಕ್ತ ವಿವಿ ಮುಚ್ಚುವುದಿಲ್ಲ: ಜಾವಡೇಕರ್‌
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚುವಂತಹ ಕಠಿಣ ನಿರ್ಧಾರ ಕೈಗೊಳ್ಳುವುದಿಲ್ಲವೆಂದು ಭರವಸೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌, ಈ ಕುರಿತು ಚರ್ಚಿಸಲು ಅ. 17ರಂದು ಮಹತ್ವದ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ. ಮುಕ್ತ ವಿವಿ ಮುಚ್ಚದಂತೆ ಮನವಿ ಮಾಡಿಕೊಳ್ಳಲು ಬಿಜೆಪಿ ಕಚೇರಿಗೆ ಬಂದಿದ್ದ ವಿವಿ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಕೇಂದ್ರ ಸಚಿವರು, ಮುಕ್ತ ವಿವಿ ಸಮಸ್ಯೆಗಳಲ್ಲಿ ಮೂರ್ನಾಲ್ಕು ಆಯಾಮಗಳಿವೆ. ವಿವಿಯಲ್ಲಿ ನಡೆದಿರುವ ಅಕ್ರಮ ಅದರಲ್ಲಿ ಪ್ರಮುಖವಾದದ್ದು. ಈ ಕುರಿತು ಯುಜಿಸಿ ಕೂಡ ತನಿಖೆ ನಡೆಸಿ ವರದಿ ನೀಡಿದೆ. ಹೀಗಾಗಿ ಕೆಲವು ಸಮಸ್ಯೆಗಳು ಉದ್ಭವಿಸಿದೆ. ಆದರೆ, ಇದರಿಂದ ಅರ್ಹ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಆದ್ದರಿಂದ ಈ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅ.17ರಂದು ಮಹತ್ವದ ಸಭೆ ಕರೆದಿದ್ದೇನೆ. ಜತೆಗೆ ಸಮಸ್ಯೆ ಬಗೆಹರಿಸುವ ಕುರಿತಂತೆ ಯುಜಿಸಿ ಮತ್ತು ರಾಜ್ಯ ಸರ್ಕಾರದ ಜತೆಗೂ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಮುಕ್ತ ವಿವಿಗೆ ಕಾಯಕಲ್ಪ: ವಿಶ್ರಾಂತ ಕುಲಪತಿಗಳ ಸಭೆ
ಮೈಸೂರು:
ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ)ದ ಮಾನ್ಯತೆ ರದ್ದಾಗಿ ಮುಚ್ಚುವ ಹಂತ ತಲುಪಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಕಾಯಕಲ್ಪ ನೀಡುವ ಸಂಬಂಧ ವಿಶ್ರಾಂತ ಕುಲಪತಿಗಳು ಶುಕ್ರವಾರ ಸಭೆ ನಡೆಸಿದರು.

ವಿಶ್ರಾಂತ ಕುಲಪತಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ಎಸ್‌.ಎನ್‌.ಹೆಗ್ಡೆ ನೇತೃತ್ವದಲ್ಲಿ ಸಭೆ ನಡೆಯಿತು. ಮುಕ್ತ ವಿವಿಯಲ್ಲಿ ಈ ಹಿಂದೆ ರೂಪಿಸಲಾದ ಕಾಯ್ದೆ ಮತ್ತು ತಿದ್ದುಪಡಿ, ಯಾವ್ಯಾವ ಮಾನದಂಡದ ಆಧಾರದ ಮೇಲೆ ಯುಜಿಸಿ ಪೂರ್ವಾನ್ವಯ ಆಗುವಂತೆ ಮಾನ್ಯತೆ ರದ್ದುಪಡಿಸಿದೆ, ಇದನ್ನು ಸರಿಪಡಿಸುವುದು ಹೇಗೆ ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ವಿಶ್ರಾಂತ ಕುಲಪತಿಗಳಾದ ಪ್ರೊ.ಎಸ್‌.ಎನ್‌.ಹೆಗ್ಡೆ, ಪದ್ಮಶ್ರೀ ಡಾ.ಎಂ.ಮಹದೇವಪ್ಪ, ಪ್ರೊ.ಎಂ.ಮಾದಯ್ಯ, ಪ್ರೊ.ಇಂಧುಮತಿ, ಪ್ರೊ.ಮಂಜಪ್ಪ, ಪ್ರೊ.ಶಶಿಧರ ಪ್ರಸಾದ್‌, ಸುಂದರೇಶನ್‌ ಹಾಜರಿದ್ದರು.

ರಾಜ್ಯ ಸರ್ಕಾರಕ್ಕೆ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮುಚ್ಚುವ ಉದ್ದೇಶವಿಲ್ಲ. ಆದರೆ, ಯುಜಿಸಿಯು ಕೆಎಸ್‌ಒಯುಗೆ ಅನುಮತಿ ನೀಡಲು ವಿಳಂಬ ಮಾಡುತ್ತಿದೆ. ಈ ಕುರಿತು ನಾನೂ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಹಾಗೂ ಯುಜಿಸಿಗೆ ಪತ್ರ ಬರೆದಿದ್ದೇವೆ. ಮುಂದಿನ ವಾರ ಕೇಂದ್ರ ಸಚಿವ ಪ್ರಕಾಶ ಜಾಬ್ಡೇಕರ್‌ ಭೇಟಿಗೆ ಅವಕಾಶ ಕೇಳಿದ್ದೇನೆ. ಅವರು ಅವಕಾಶ ಕೊಟ್ಟರೆ ಅಧಿ ಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು.
– ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

ಮುಕ್ತ ವಿಶ್ವವಿದ್ಯಾಲಯ ಮುಚ್ಚದೆ ಅದರ ಮಾನ್ಯತೆ ನವೀಕರಿಸಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ನೇತೃತ್ವದಲ್ಲಿ ವಿವಿ ನೌಕರರು, ವಿದ್ಯಾರ್ಥಿಗಳು  ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಮನವಿ ಸಲ್ಲಿಸಿದರು. ಕೇಂದ್ರ ಸಚಿವ ಅನಂತಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next