Advertisement

ಎಲ್‌ಪಿಜಿ ದರ ಏರಿಕೆ ವಿರೋಧಿಸಿ ಪ್ರತಿಭಟನೆ

04:52 PM May 12, 2022 | Team Udayavani |

ಶಹಾಬಾದ: ಎಲ್‌ಪಿಜಿ ದರ ಏರಿಕೆ ವಿರೋಧಿಸಿ ಎಸ್‌ಯುಸಿಐ (ಸಿ) ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಎಸ್‌ಯುಸಿಐ (ಕಮ್ಯುನಿಸ್ಟ್‌) ನಗರದ ಕಾರ್ಯದರ್ಶಿ ಗಣಪತರಾವ್‌ ಕೆ.ಮಾನೆ ಮಾತನಾಡಿ, ಅಚ್ಚೇ ದಿನ್‌ ಎಂದರೆ ಅದಾನಿ ಅಂಬಾನಿಗಳ ಅಚ್ಚೇ ದಿನ್‌ ಹೊರತು ಜನಸಾಮಾನ್ಯರಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಚಿತವಾಗಿ ಸಿಲಿಂಡರ್‌ ಕೊಡುತ್ತೇವೆ ಎಂದು ಹೇಳಿ ಈಗ ಕೇಂದ್ರ ಸರ್ಕಾರವು ಏಕಾಏಕಿ 50ರೂ.ಗೆ ಏರಿಸಿದೆ. ಈ ಬೆಲೆ ಏರಿಕೆ ಪ್ರಹಾರ ನಿರಂತರವಾಗಿ ನಡೆಯುತ್ತಲೇ ಇದೆ. ಪ್ರತಿಯೊಂದು ಕ್ಷೇತ್ರ ಖಾಸಗೀಕರಣ ಮಾಡುತ್ತಿರುವ ಬಿಜೆಪಿ ಸರ್ಕಾರ ಇತ್ತೀಚೆಗೆ ಕಾರ್ಪೊರೇಟ್‌ ಧಣಿಗಳ 68,000 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ಸಾಮಾನ್ಯ ಜನರನ್ನು ವಂಚಿಸಿ ಹಗಲು ದರೋಡೆಗೆ ಸರ್ಕಾರವು ಮುಂದಾಗಿದೆ ಎಂದು ಕಿಡಿಕಾರಿದರು.

ಕೋವಿಡ್‌ ನಂತರ ಜನರಿಗೆ ಆದಾಯವಿಲ್ಲ. ಕೆಲವರು ಕೆಲಸ ಕಳೆದು ಕೊಂಡಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ಸರ್ಕಾರ ತೆರಿಗೆ ಮೇಲೆ ತೆರಿಗೆ ವಿಧಿಸಿ ಜನರನ್ನು ಲೂಟಿ ಹೊಡೆಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ನಿರುದ್ಯೋಗ, ವೇತನ ಕಡಿತ ಹೆಚ್ಚಾಗಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ಮುಖಂಡ ಜಗನ್ನಾಥ.ಎಸ್‌.ಎಚ್‌. ಮಾತನಾಡಿ, ಡಬಲ್‌ ಇಂಜಿನ್‌ ಸರ್ಕಾರವೆಂದು ಹೇಳಿಕೊಂಡು ಡಬಲ್‌ ದರೋಡೆ ನಡೆಯುತ್ತಿದೆ. ಒಂದೆಡೆ ಜನಸಾಮಾನ್ಯರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದು ಕಡೆ 140 ಶತ ಕೋಟ್ಯಧಿಪತಿಗಳು ನಮ್ಮ ದೇಶದಲ್ಲಿದ್ದಾರೆ. ರೈತರ ಹೋರಾಟದಿಂದ ಸ್ಫೂರ್ತಿ ಪಡೆದು ಸರ್ಕಾರದ ಕಾರ್ಪೊರೇಟ್‌ ಪರ ನೀತಿಗಳನ್ನು ಹಿಂಪಡೆಯುವಂತೆ ಮಾಡಬೇಕಾಗಿದೆ. ಬೆಲೆ ಏರಿಕೆ ಹಿಂಪಡೆಯದೇ ಇದ್ದರೆ ಈ ಹೋರಾಟವನ್ನು ಮತ್ತಷ್ಟು ಬಲಗೊಳಿಸಲಾಗುವುದು ಎಂದರು.

ಗುಂಡಮ್ಮ ಮಡಿವಾಳ ಮಾತನಾಡಿ ದರು. ರಾಜೇಂದ್ರ ಅತನೂರು ಅಧ್ಯಕ್ಷತೆ ವಹಿಸಿದ್ದರು. ಸಿದ್ಧು ಚೌಧರಿ, ತುಳಜಾರಾಮ ಎನ್‌.ಕೆ, ರಮೇಶ ದೇವಕರ್‌, ತಿಮ್ಮಯ್ಯ ಮಾನೆ, ನೀಲಕಂಠ ಎಂ. ಹುಲಿ, ಪ್ರವೀಣ, ರಘು ಪವಾರ, ಶ್ರೀನಿವಾಸ, ಆನಂದ, ಮಹಾದೇವಿ ಅತನೂರ, ರಾಕಾ, ಅಜಯ್‌, ಕಿರಣ, ಮಹಾದೇವ ಸ್ವಾಮಿ, ಮಲ್ಲಣ್ಣ ಗೌಡ ತೊನಸನಳ್ಳಿ, ಬಸಣ್ಣ ರೆಡ್ಡಿ ತೊನಸನಳ್ಳಿ, ಹೊನ್ನಪ್ಪ ಹಾಗೂ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next