Advertisement

ಕೋಡಿಹಳ್ಳಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

04:22 PM May 27, 2022 | Team Udayavani |

ಚಿತ್ರದುರ್ಗ: ಜನ ವಿರೋಧಿ ಚಟುವಟಿಕೆ ಹಾಗೂ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಎಪಿಎಂಸಿ ಆವರಣದಿಂದ ಕೋಡಿಹಳ್ಳಿ ಚಂದ್ರಶೇಖರ್‌ ಅವರ ಪ್ರತಿಕೃತಿಯೊಂದಿಗೆ ಗಾಂಧಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರೈತ ನಾಯಕ ಪ್ರೊ| ನಂಜುಂಡಸ್ವಾಮಿ ಹಾಗೂ ರೈತ ಹೋರಾಟಕ್ಕೆ ಕೋಡಿಹಳ್ಳಿ ದೊಡ್ಡ ಕಳಂಕವಾಗಿದ್ದಾರೆ. ಇವರ ನಡೆಯಿಂದ ಜನಪರ ಚಳವಳಿಗಳನ್ನು ಸಂಶಯದಿಂದ ನೋಡುವಂತಾಗಿದ್ದು, ಹೋರಾಟಗಾರ ಎಂಬ ಪದಕ್ಕೆ ಅಪವಾದವಾಗಿದ್ದಾರೆ ಎಂದು ಆರೋಪಿಸಿದರು.

ಯಾವುದೇ ಪ್ರಾಮಾಣಿಕ ಆದಾಯದ ಮೂಲವಿಲ್ಲದೆ 2006ರಿಂದ ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇವರ ಭ್ರಷ್ಟಾಚಾರದ ಬಗ್ಗೆ ಸಿಬಿಐ ಮೂಲಕ ತನಿಖೆ ನಡೆಸಿ ರೈತ ಚಳವಳಿಗಳ ಗೌರವ ಕಾಪಾಡಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ ರೆಡ್ಡಿ, ಈಚಘಟ್ಟದ ಸಿದ್ಧವೀರಪ್ಪ, ಬಸವರಾಜಪ್ಪ, ಶ್ರೀನಿವಾಸ್‌, ಲಿಂಗರಾಜು, ಮಹದೇವಪ್ಪ, ರಾಜಶೇಖರ್‌, ರಮೇಶ್‌ ಇತರರು ಪಾಲ್ಗೊಂಡಿದ್ದರು.

ಪೊಲೀಸರೊಂದಿಗೆ ವಾಗ್ವಾದ

ಎಪಿಎಂಸಿ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ಪ್ರತಿಕೃತಿ ದಹನಕ್ಕೆ ಪ್ರತಿಭಟನಾಕಾರರು ಸಿದ್ಧತೆ ನಡೆಸಿದ್ದರು. ವಿಷಯ ತಿಳಿದ ಪೊಲೀಸರು ಪ್ರತಿಕೃತಿ ದಹನಕ್ಕೆ ಅನುಮತಿ ನಿರಾಕರಿಸಿದರು. ಈ ವೇಳೆ ಪೊಲೀಸರು ಹಾಗೂ ರೈತ ಮುಖಂಡರ ನಡುವೆ ವಾಗ್ವಾದ ನಡೆಯಿತು. ಬಳಿಕ ಪ್ರತಿಕೃತಿ ದಹನ ನಿರ್ಧಾರದಿಂದ ಹಿಂದೆ ಸರಿದು ಪ್ರತಿಭಟನೆ ನಡೆಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next