ಗಂಗಾವತಿ: ನಗರದ ಸಮೀಪದಲ್ಲಿರುವ ಹೊಸಳ್ಳಿ ಗ್ರಾಮದಲ್ಲಿ 12 ಈ ಮದ್ಯ ಅಕ್ರಮ ಮಾರಾಟ ಮಾಡುವ ಅಂಗಡಿಗಳಿದ್ದು ಇವುಗಳಿಗೆ ಗಂಗಾವತಿಯಲೈಸನ್ಸ್ ಇರುವ ಮದ್ಯ ಮಾರಾಟಗಾರರು ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದು ಕೂಡಲೇ 12 ಮದ್ಯ ಮಾರಾಟ ಮಾಡುವ ಅಕ್ರಮ ಅಂಗಡಿಗಳನ್ನು ಬಂದ್ ಮಾಡಿಸಬೇಕು ಜೊತೆಗೆ ಗಂಗಾವತಿಯಲ್ಲಿ ಮದ್ಯವನ್ನು ಅಕ್ರಮವಾಗಿ ಸರಬರಾಜು ಮಾಡುವವರ ಅಬಕಾರಿ ಗುತ್ತಿಗೆದಾರರ ಲೈಸೆನ್ಸ್ ರದ್ದು ಮಾಡುವಂತೆ ಹೊಸಳ್ಳಿ ಗ್ರಾಮಸ್ಥರು ಸೋಮವಾರ ಅಬಕಾರಿ ಇಲಾಖೆ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹೊಸಳ್ಳಿ ಶಂಕರಗೌಡ ಮಾತನಾಡಿ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟ ದಿಂದಾಗಿ ದಿನದಿಂದ ದಿನಕ್ಕೆ ಶಾಂತಿ ನೆಮ್ಮದಿ ಹಾಳಾಗುತ್ತಿದೆ. ಈ ಕುರಿತು ಹಲವು ಬಾರಿ ಇಲಾಖೆಗೆ ಹಾಗೂ ಪೊಲೀಸ್ ಇಲಾಖೆ ಶಾಸಕರು ಸಂಸದರು ಜಿಲ್ಲಾಧಿಕಾರಿಗಳಿಗೂ ಪತ್ರ ಸಲ್ಲಿಸಿದರು ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ ಧೋರಣೆ ಅನುಸರಿಸುವುದು ಸೂಕ್ತವಲ್ಲ. ಇಲಾಖೆಯ ಮುಖ್ಯಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು .ಗಂಗಾವತಿಯಲ್ಲಿ ಪ್ರಮುಖ ಅಬಕಾರಿ ಗುತ್ತಿಗೆದಾರರ ಅಂಗಡಿಯಿಂದ ಹೊಸಳ್ಳಿಗೆ ಮದ್ಯ ಸರಬರಾಜು ಆಗುತ್ತಿದ್ದು ಕೂಡಲೇ ಅದನ್ನು ತಡೆದು ಮದ್ಯ ಸರಬರಾಜು ಮಾಡಿರುವ ಲೈಸೆನ್ಸ್ ರದ್ದು ಮಾಡಬೇಕು.
ಯಾವುದೇ ಕಾರಣಕ್ಕೂ ಅನಧಿಕೃತ ಮದ್ಯ ಮಾರಾಟ ವಾಗದಂತೆ ಎಚ್ಚರಿಕೆವಹಿಸಬೇಕು. ಮಾರಾಟಗಾರರನು ಪಂಚಾಯಿತಿಗೆ ಕರೆಸಿ ತಿಳಿಹೇಳಿದರೂ ಅಕ್ರಮ ಮದ್ಯ ಮಾರಾಟವನ್ನು ಮುಂದುವರಿಸಿದ್ದಾರೆ. ಗಂಗಾವತಿಯಲ್ಲಿ ಲೈಸೆನ್ಸ್ ಇರುವ ಮದ್ಯದಂಗಡಿಯ ಮಾಲೀಕರು ಬಹಿರಂಗವಾಗಿ ಗ್ರಾಮಾಂತರ ಪ್ರದೇಶಗಳಿಗೆ ಮದ್ಯವನ್ನು ಅಕ್ರಮವಾಗಿ ಸರಬರಾಜು ಮಾಡಿ ಲಕ್ಷಾಂತರ ರೂ ಆದಾಯ ಗಳಿಸುತ್ತಿದ್ದಾರೆ. ಸಣ್ಣ ಸಣ್ಣ ಯುವಕರ ಆರೋಗ್ಯದ ಮೇಲೆ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟದಿಂದ ಪರಿಣಾಮವಾಗಿದ್ದು ಕೂಡಲೇ ಜಿಲ್ಲಾಡಳಿತ ಮದ್ಯದ ಅಕ್ರಮ ಮಾರಾಟ ನಿಲ್ಲಿಸಬೇಕು . ವಾರದೊಳಗೆ ಕಠಿಣಕ್ರಮ ಜರುಗಿಸದೇ ಇದ್ದಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಹೊಸಳ್ಳಿ ಗ್ರಾಮದ ಮುಖಂಡರಾದ ಕಲ್ಗುಡಿ ಮರಿಯಪ್ಪ ಹೊಸಳ್ಳಿ, ದುರ್ಗಪ್ಪ ಮೋರಿ, ಗಾಳಿ ಮಾರಪ್ಪ ,ಮರಿಯಪ್ಪ ಜಿ ಆರ್, ಶಿವಪ್ಪ ಬಲಕುಂದಿ, ನಾಗಪ್ಪ ಗ್ರಾ. ಪಂ. ಸದಸ್ಯ ಗ್ರಾಪಂ ಉಪಾಧ್ಯಕ್ಷ ಹನುಮಂತಪ್ಪ ನಾಯಕ್ , ಗುರುಪಾದಯ್ಯ ಸ್ವಾಮಿ ದಳಪತಿ, ದಾದಾ ಸಾಂಗ್ ಶಿವಪ್ಪ ,ಚಂದ್ರಪ್ಪ ಚಲವಾದಿ ಗ್ರಾಮದ ಮುಖಂಡರಿದ್ದರು