Advertisement
ನೆಲ್ಯಾಡಿ: ನೆಲ್ಯಾಡಿ ಗ್ರಾ.ಪಂ. ಮಹಿಳಾ ಗ್ರಾಮಸಭೆಯು ಗ್ರಾ.ಪಂ. ಉಪಾಧ್ಯಕ್ಷೆ ಉಮಾವತಿ ಅವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ದ.ಕ. ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥೆಯೋರ್ವರು, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳು ಬಂದ್ ಆಗಿವೆ. ಆದರೆ ನೆಲ್ಯಾಡಿಯಲ್ಲಿನ ಮದ್ಯದಂಗಡಿಯೊಂದು ಅಡ್ಡದಾರಿ ಮಾಡಿಕೊಂಡು ಹಿಂಬಾಗಿಲ ಮೂಲಕ ಕಾರ್ಯಾಚರಿಸುತ್ತಿದೆ. ಇದರ ವಿರುದ್ಧ ಇಲಾಖೆಗಳಿಗೆ ಮನವಿ ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮದ್ಯದಂಗಡಿಗೆ ಬರುವ ಕೆಲವರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದನ್ನು ವಿರೋಧಿಸುತ್ತಿರುವ ನಮಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಗ್ರಾಮಸ್ಥರೂ ಧ್ವನಿಗೂಡಿಸಿ ಮದ್ಯದಂಗಡಿ ಬಂದ್ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆ. 2ರಂದು ನಡೆಯುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ನಿರ್ಣಯ ಕೈಗೊಳ್ಳಲಾಯಿತು. ಗ್ರಾ.ಪಂ. ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಅವರು ಮಾತನಾಡಿ, ಮದ್ಯದಂಗಡಿಯಿಂದ ಮಹಿಳೆಯರಿಗೆ ತೊಂದರೆಯಾದಲ್ಲಿ ರಕ್ಷಣೆಗೆ ಜನಜಾಗೃತಿ ವೇದಿಕೆ ಹೋರಾಟಕ್ಕೆ ಸಿದ್ಧವಿದೆ. ಈಗಾಗಲೇ ಪ್ರತಿಭಟನೆಗೆ ದಿನ ನಿಗದಿಯಾಗಿದೆ ಎಂದರು.
ಪಡ್ಡಡ್ಕದಲ್ಲಿ ಹಂದಿ ಸಾಕಾಣಿಕೆಯಿಂದ ಮಕ್ಕಳಿಗೆ ರೋಗ ಹರಡುವ ಭೀತಿ ಇದೆ ಎಂದು ಮಹಿಳೆಯರು ಸಭೆಯ ಗಮನಕ್ಕೆ ತಂದರು. ನೆಲ್ಯಾಡಿ ಪೇಟೆ ಅಂಗನವಾಡಿ ಪಕ್ಕದಲ್ಲಿರುವ ಸರಕಾರಿ ಜಾಗವನ್ನು ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ಮಂಜೂರುಗೊಳಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆ ಆಗ್ರಹಿಸಿದರು. ಅಂಗನವಾಡಿ ವಲಯ ಮೇಲ್ವಿಚಾರಕಿ ಉಮಾವತಿ, ಗ್ರಾ.ಪಂ. ಸದಸ್ಯರಾದ ಅಬ್ರಹಾಂ ಕೆ.ಪಿ., ಅಬ್ದುಲ್ ಹಮೀದ್, ಚಿತ್ರಾ ರಾಮನಗರ, ಫ್ಲೋರಿನಾ ಡಿ’ಸೋಜಾ ಉಷಾ ಜೋಯಿ, ಉಮಾವತಿ ದರ್ಖಾಸು, ಲೈಲಾಥೋಮಸ್, ತೀರ್ಥೇಶ್ವರ ಯು. ಉಪಸ್ಥಿತರಿದ್ದರು. ಪಿ.ಡಿ.ಒ. ದೇವರಾಜ್ ಸ್ವಾಗತಿಸಿ ನಿರೂಪಿಸಿದರು. ಉಷಾ ವಂದಿಸಿದರು.